ಮಂಡ್ಯ: ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಲ್ಲಿನ ಸಹಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಟಾರ್ಚ್ ಹಿಡಿದು ನೋಡಿದರೂ ಅದು ಸರ್ಕಾರಿ ಭೂಮಿ ಎಂಬುದು ಸತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮುಡಾ ಬೆಳವಣಿಗೆಗಳ ಬಗ್ಗೆ ಟಾರ್ಚ್ ಹಾಕಿ ನೋಡಿದರೂ ಅಷ್ಟೇ, ಟಾರ್ಚ್ ಹಾಕದೇ ಇದ್ದರೂ ಅಷ್ಟೇ. ಅದು ಸರ್ಕಾರಿ ಭೂಮಿ. ಸರ್ಕಾರಿ ಭೂಮಿ ಲಪಟಾಯಿಸಿ 15 ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿದರು.
ಕಾನೂನು ಪ್ರಕಾರ ನಿವೇಶನ ಪಡೆದರೆ ನಮ್ಮ ವಿರೋಧವಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿದ್ದಾರೆ. ಸಾಮಾನ್ಯ ರೈತನೊಬ್ಬ ಖಾತೆ ಮಾಡಿಕೊಡಲು ಹೇಳಿದರೆ ಮಾಡುತ್ತೀರಾ? ಭೂ ಪರಿವರ್ತನೆ ಮಾಡಿದ್ದೀರಿ ಅಲ್ವಾ? ಅದು ಯಾರ ಭೂಮಿ? ಸತ್ತಿರುವ ವ್ಯಕ್ತಿ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ್ ಆಗಿದೆ. ಅವರ ಇನ್ನೊಬ್ಬ ಮಗನ ಆಕ್ಟಿವಿಟೀಸ್ ನಲ್ಲಿ ಹೇಳಿ ಮಾಡಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಕೇಶ್ ಸಿದ್ದರಾಮಯ್ಯ ಬಗ್ಗೆ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.