ಬೆಂಗಳೂರು: ಕಾರ್ಯಕರ್ತರನ್ನು ಕಡೆಗಣಿಸಿದ, ಅಭಿವೃದ್ಧಿ ಕಾರ್ಯ ಮಾಡದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದಂತೆ ಪಕ್ಷದ ಮುಖಂಡರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕ ಗುರುಸಿದ್ದನಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿ ಸ್ವಾಮಿ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಅಜಯ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗ ಸಿದ್ದೇಶ್ವರ್ ಗೆ ಟಿಕೆಟ್ ನೀಡದಂತೆ ಮನವಿ ಸಲ್ಲಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಹಾಲಿ ಸಂಸದ ಸಿದ್ದೇಶ್ವರ ಸ್ಪರ್ಧೆಗೆ ವಿರೋಧ ಇದೆ. ನಾಲ್ಕು ಬಾರಿ ಗೆದ್ದರೂ ಜಿಲ್ಲೆಯನ್ನು ಅವರು ಅಭಿವೃದ್ಧಿಪಡಿಸಿಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಹೀಗಾಗಿ ಅವರಿಗೆ ಟಿಕೆಟ್ ಕೊಡಬಾರದು. ಒಂದು ವೇಳೆ ಟಿಕೆಟ್ ನೀಡಿದಲ್ಲಿ ಸೋಲುವ ಸಾಧ್ಯತೆ ಇದೆ ಎಂದು ಮುಖಂಡರ ನಿಯೋಗ ಪಕ್ಷದ ನಾಯಕರಿಗೆ ಮನವಿ ಮಾಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಕೆಲಸ ಮಾಡದೆ ಕೆಲವು ಕಡೆ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಸಿದ್ದೇಶ್ವರ ಕಾರಣರಾಗಿದ್ದಾರೆ. ಅವರ ಸ್ಪರ್ಧೆಗೆ ವಿರೋಧ ಇರುವುದರಿಂದ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ನಿಯೋಗ ಮನವಿ ಮಾಡಿದೆ.
ಮನವಿ ಸ್ವೀಕರಿಸಿದ ಬಿ.ವೈ. ವಿಜಯೇಂದ್ರ, ಸಮೀಕ್ಷೆ ನಡೆಸಿ ಟಿಕೆಟ್ ಕೊಡಲಾಗುತ್ತದೆ. ಎಲ್ಲ 28 ಕ್ಷೇತ್ರಗಳಲ್ಲಿಯೂ ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲಾಗುವುದು. ಕಾರ್ಯಕರ್ತರ ಒಲವು ಯಾರ ಕಡೆಗೆ ಇದೆಯೋ ಅವರ ಆಶಯದಂತೆ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.