ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಉದ್ದೇಶದಿಂದ ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಇತ್ತೀಚೆಗೆ ಪ್ರಕಟವಾದ ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಪ್ರಬಲ ನಾಯಕರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಸಚಿವರು ಹಾಗೂ ಅನುಭವಿ ನಾಯಕರಿಗೆ ಆದ್ಯತೆ ನೀಡಲು ಪಕ್ಷದಲ್ಲಿ ಚಿಂತನೆ ನಡೆದಿದೆ.
ಶಾಸಕರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಸಮರ್ಥ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿದ್ದಪಡಿಸುತ್ತಿದ್ದಾರೆ. ಶತಾಯಗತಾಯ ಗೆಲ್ಲಬಲ್ಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಬಹುತೇಕ ಸಚಿವರನ್ನೇ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆದಿದೆ.
ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಅಥವಾ ಅವರ ಪುತ್ರಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಲಕ್ಷ್ಮಣ ಸವದಿ ಪುತ್ರ ಅಥವಾ ಗಣೇಶ ಹುಕ್ಕೇರಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಹಾವೇರಿಯಿಂದ ಸಚಿವ ಹೆಚ್.ಕೆ. ಪಾಟೀಲ್, ದಕ್ಷಿಣ ಕನ್ನಡದಿಂದ ಯು.ಟಿ. ಖಾದರ್ ಕಣಕ್ಕಿಳಿಸಲು ಚಿಂತನೆ ನಡೆದಿದೆ.
ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್, ಸಂಯುಕ್ತ ಶಿವಾನಂದ ಪಾಟೀಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ಇದೆ. ಕಲ್ಬುರ್ಗಿಯಿಂದ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ, ಉತ್ತರ ಕನ್ನಡದಿಂದ ಆರ್.ವಿ. ದೇಶಪಾಂಡೆ, ಮೈಸೂರಿನಿಂದ ಲಕ್ಷ್ಮಣ್ ಅಥವಾ ಶುಶ್ರುತ್ ಗೌಡ, ಬಳ್ಳಾರಿಯಿಂದ ಸೌಪರ್ಣಿಕಾ ತುಕಾರಾಂ, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣದಿಂದ ಪ್ರಿಯ ಕೃಷ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ಇದೆ. ಈ ನಿಟ್ಟಿನಲ್ಲಿ ಪಠಿಸಿದ್ಧ ಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.