ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. 2025ರ ಜನವರಿ 17 ರಿಂದ 22ರೊಳಗೆ ಈ ಎಲೆಕ್ಟ್ರಿಕ್ SUV ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ. ಈಗಾಗ್ಲೇ 2023ರ ಆಟೋ ಎಕ್ಸ್‌ಪೋದಲ್ಲಿ ಇದನ್ನು ಪರಿಚಯಿಸಲಾಗಿದೆ. 60 kWh ಬ್ಯಾಟರಿ ಹೊಂದಿರುವ ಈ ಕಾರು ಸುಮಾರು 550 ಕಿಮೀ ವ್ಯಾಪ್ತಿಯನ್ನು ನೀಡಬಹುದು. ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಿನಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಆಧುನಿಕ ವೈಶಿಷ್ಟ್ಯಗಳಿರಲಿವೆ. ಇದರ ಬೆಲೆ 20-25 ಲಕ್ಷ ಎಂದು ಅಂದಾಜಿಸಲಾಗಿದೆ.
ಮಾರುತಿ eVX ಬೃಹತ್ 60 kWh ಬ್ಯಾಟರಿಯೊಂದಿಗೆ ಬರಲಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಸುಮಾರು 500-550 ಕಿಮೀ ಓಡಬಲ್ಲದು. ಇದರ ಹೊರತಾಗಿ ಸಣ್ಣ ಬ್ಯಾಟರಿ ರೂಪಾಂತರವೂ ಇದ್ದು, ಅದರ ವ್ಯಾಪ್ತಿ ಸುಮಾರು 400 ಕಿ.ಮೀ.
ಸ್ಪೋರ್ಟಿ ಎಲ್‌ಇಡಿ ಹೆಡ್‌ಲೈಟ್‌ಗಳು, ಡಿಆರ್‌ಎಲ್ ಮತ್ತು ಮುಚ್ಚಿದ ಮುಂಭಾಗದ ಗ್ರಿಲ್ ಈ ಕಾರಿನ ಆಕರ್ಷಣೆ. ಇದು ಅತ್ಯದ್ಭುತ ಆಧುನಿಕ ವಿನ್ಯಾಸ ಹೊಂದಿರಲಿದೆ. ಕನೆಕ್ಟೆಡ್ ಎಲ್ಇಡಿ ಟೈಲ್ಲೈಟ್ಸ್ ಮತ್ತು ಹಿಂಭಾಗದಲ್ಲಿ ಅಲಾಯ್ ಚಕ್ರಗಳ ವಿನ್ಯಾಸವು ಪ್ರೀಮಿಯಂ ಅನುಭವವನ್ನು ನೀಡುತ್ತದೆ.
eVX ದೊಡ್ಡ ಡ್ಯುಯಲ್-ಸ್ಕ್ರೀನ್ ಡಿಜಿಟಲ್ ಡಿಸ್‌ಪ್ಲೇ ಮತ್ತು ಪುಟ್ಟದಾದ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ. ಅದು ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ ಇದು ಟಚ್-ಆಧಾರಿತ ಮೌಂಟೆಡ್ ಕಂಟ್ರೋಲ್‌ನೊಂದಿಗೆ ಟು – ಸ್ಪೋಕ್ ಸ್ಟೀರಿಂಗ್ ಚಕ್ರವನ್ನು ಹೊಂದಿರುತ್ತದೆ.
eVX ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಹೊಂದುವ ಸಾಧ್ಯತೆಯಿದೆ. ಹಾಗಾಗಿ ಈ ಕಾರಿನಲ್ಲಿ ಸೇಫ್ಟಿಯ ಸಮಸ್ಯೆ ಆಗುವುದಿಲ್ಲ. ಇದು ಕಾಂಪ್ಯಾಕ್ಟ್ SUV ಆಗಿದ್ದು, ಸುಮಾರು 4.3 ಮೀಟರ್ ಉದ್ದವಿರಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾಗಿದೆ. ಬೆಲೆ ಮತ್ತು ಫೀಚರ್‌ಗಳನ್ನು ಗಮನಿಸಿದರೆ ಇದು ಭಾರತದ ಇವಿ ಮಾರುಕಟ್ಟೆಯ ಪ್ರೀಮಿಯಂ ಕಾರು ಎನ್ನುವುದರಲ್ಲಿ ಅನುಮಾನವಿಲ್ಲ.