ಲೋಕಸಭೆ ಚುನಾವಣೆ ಸಮಯದಿಂದ ಆರ್ ಎಸ್ ಎಸ್, ಬಿಜೆಪಿ ಪಕ್ಷ ಚಟುವಟಿಕೆಗಳಿಂದ ದೂರವಿದ್ದು ಪಕ್ಷದ ನಾಯಕರ ನಡೆ ಟೀಕಿಸುತ್ತಿದ್ದ ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿಯವರು ತಮ್ಮನ್ನು ದೇವರು ಕಳಿಸಿಕೊಟ್ಟಿದ್ದಾರೆಂದು ನೀಡಿದ್ದ ಹೇಳಿಕೆಯನ್ನು ಟೀಕಿಸಿ ಈ ಬಾರಿ ಆರ್‌ಎಸ್‌ಎಸ್ ಸರಸಂಘಚಾಲಕ್ ಪ್ರಸ್ತಾಪಿಸಿದ್ದಾರೆ.
ಇತ್ತೀಚೆಗೆ ಪುಣೆಯಲ್ಲಿ ನಡೆದ ಸಭೆಯೊಂದರಲ್ಲಿ ಮೋಹನ್ ಭಾಗವತ್ “ನಾವು ನಮ್ಮನ್ನು ದೇವರೆಂದು ಪರಿಗಣಿಸಬಾರದು. ನಿಮ್ಮಲ್ಲಿ ದೇವರಿದ್ದಾನೆಯೇ ಎಂದು ಜನರು ನಿರ್ಧರಿಸಲಿ” ಎಂದು ಪರೋಕ್ಷವಾಗಿ ಚುನಾವಣಾ ಪ್ರಚಾರದ ವೇಳೆ ಸಂದರ್ಶಕರಿಗೆ ಮೋದಿ ನೀಡಿದ್ದ ಹೇಳಿಕೆಯನ್ನ ಟೀಕಿಸಿದ್ದಾರೆ.
ಸಂದರ್ಶನದಲ್ಲಿ ಪ್ರಧಾನಿ ಮೋದಿ “ನನ್ನ ತಾಯಿ ಜೀವಂತವಾಗಿದ್ದಾಗ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಂಬುತ್ತಿದ್ದೆ. ಅವರು ತೀರಿಕೊಂಡ ನಂತರ ದೇವರು ನನ್ನನ್ನು ಕಳುಹಿಸಿದ್ದಾನೆ ಎಂದು ನನಗೆ ಮನವರಿಕೆಯಾಯಿತು. ಶಕ್ತಿಯು ಜೈವಿಕವಾಗಿ ದೇಹದಿಂದ ಬರಲು ಸಾಧ್ಯವಿಲ್ಲ, ಆದರೆ ದೇವರಿಂದ ನನಗೆ ದಯಪಾಲಿಸಲಾಗಿದೆ ……. ಕೆಲಸಗಳನ್ನು ಮಾಡಲು ನಾನು ದೇವರಿಗೆ ಒಂದು ಸಾಧನ” ಎಂದಿದ್ದರು.
ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಆರ್‌ಎಸ್‌ಎಸ್ ನ ವಾರ್ಷಿಕ ಸಭೆಯಲ್ಲಿ ಜೆಪಿ ನಡ್ಡಾ ಮತ್ತು ಬಿಎಲ್ ಸಂತೋಷ್ ಅವರಂತಹ ಹಿರಿಯ ಬಿಜೆಪಿ ನಾಯಕರು ಭಾಗವಹಿಸಿದ ನಂತರ, ಭಾಗವತ್ ಅವರ ಇತ್ತೀಚಿನ ಹೇಳಿಕೆ ಲೋಕಸಭೆ ಚುನಾವಣೆಯ ನಂತರ ಪ್ರಧಾನಿಯವರ ಬಗ್ಗೆ ಮೂರನೇ ಪರೋಕ್ಷ ಟೀಕೆಯಾಗಿದೆ.
ಪ್ರಧಾನಿ ಮೋದಿ ಆರ್‌ಎಸ್‌ಎಸ್‌ನ ಹಾರ್ಡ್ ಕೋರ್ ಅಜೆಂಡಾಗಳಾದ ರಾಮ ಮಂದಿರ, ಆರ್ಟಿಕಲ್ 370 ರದ್ದತಿ, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆಯತ್ತ ಸಾಗುತ್ತಿರುವಾಗಲೂ ಆರ್‌ಎಸ್‌ಎಸ್ ನಾಯಕರು ಕೇಂದ್ರದ ಬಗ್ಗೆ ಟೀಕೆ ಮುಂದುವರೆಸಿದ್ದಾರೆ. ಅದನ್ನು “ವ್ಯಕ್ತಿವಾದ” (ವ್ಯಕ್ತಿತ್ವ ಆರಾಧನೆ) ಮತ್ತು ಒಬ್ಬ ನಾಯಕನ ಕೈಯಲ್ಲಿ ಅತಿಯಾದ ಅಧಿಕಾರ ಎಂದು ಕರೆಯುತ್ತಾರೆ.
ಈ ಬಾರಿ ಸಂಸತ್ತಿನ ಚುನಾವಣೆಯ ಸಮಯದಲ್ಲಿ, ಆರ್‌ಎಸ್‌ಎಸ್ ಕಾರ್ಯಕರ್ತರು ಹಿಂದಿನ ಚುನಾವಣೆಗಳಂತೆ ಉತ್ಸಾಹದಿಂದ ಬಿಜೆಪಿಗಾಗಿ ಕೆಲಸ ಮಾಡಲಿಲ್ಲ. ಪಕ್ಷ ದೊಡ್ಡದಾಗಿ ಬೆಳೆದಿದ್ದು ಇನ್ನು ಮುಂದೆ ಸಂಘದಿಂದ ಹಿಡಿತದ ಅಗತ್ಯವಿಲ್ಲ ಎಂಬ ಜೆ.ಪಿ. ನಡ್ಡಾ ಅವರ ಹೇಳಿಕೆಗಳು ಆರ್‌ಎಸ್‌ಎಸ್ ನಾಯಕರಲ್ಲಿ ಕೋಪಕ್ಕೆ ಕಾರಣವಾಗಿತ್ತು.