ಕೇಂದ್ರೀಯ ರೈಲ್ವೆ ಇಲಾಖೆಯು, ರೈಲು ನಿಲ್ದಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವಿರುವ ಶಾಶ್ವತ ಮತ್ತು ತಾತ್ಕಾಲಿಕ ಸೆಲ್ಫಿ ಪಾಯಿಂಟ್ ಗಳನ್ನು ಸ್ಥಾಪಿಸಲು ಮುಂದಾಗಿದ್ದು, ಇದಕ್ಕಾಗಿ ಈಗಾಗಲೇ ನಿಲ್ದಾಣಗಳನ್ನು ಗುರುತಿಸಲಾಗಿದೆ.
ಗುರುತಿಸಲಾಗಿರುವ ರೈಲು ನಿಲ್ದಾಣಗಳಲ್ಲಿ ತ್ರೀ ಡಿ ಸೆಲ್ಫಿ ಪಾಯಿಂಟ್ ಸ್ಥಾಪಿಸಲಾಗುತ್ತದೆ ಎನ್ನಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಮೋದಿಯವರ ಚಿತ್ರವಿರುವ ಸೆಲ್ಫಿ ಬೂತ್ ಸ್ಥಾಪಿಸುವ ರೈಲ್ವೆ ಇಲಾಖೆ ನಿರ್ಧಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಲಭ್ಯವಿರುವ ಪಟ್ಟಿಯನ್ನು ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆಯವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ಸ್ವಯಂ ಪ್ರಚಾರಕ್ಕೆ ಯಾವುದೇ ಮಿತಿ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.
ಕೆಲವು ರಾಜ್ಯಗಳಿಗೆ ಪ್ರವಾಹ ಮತ್ತು ಬರ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಈವರೆಗೂ ನೀಡಿಲ್ಲ. ಅಲ್ಲದೆ ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ನರೇಗಾ ಬಾಕಿ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿರುವ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕೆ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.