ಕನ್ಯಾಕುಮಾರಿ: ಸುದೀರ್ಘ ಎರಡು ತಿಂಗಳಿಗೂ ಅಧಿಕ ಕಾಲ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಕೈಗೊಂಡಿದ್ದಾರೆ.
ಭಾರತದ ದಕ್ಷಿಣದ ಅಂಚಿನಲ್ಲಿರುವ ಕನ್ಯಾಕುಮಾರಿಯ ವಿವೇಕಾನಂದ ಶಿಲಾಸ್ಮಾರಕದಲ್ಲಿ ಮೂರು ದಿನ ಧ್ಯಾನ ಧ್ಯಾನ ಮಾಡಲಿದ್ದಾರೆ. 45 ಗಂಟೆ ಕಾಲ ಸ್ಮಾರಕದಲ್ಲಿ ಮೋದಿ ತಂಗಲಿದ್ದು, ಅವರ ಧ್ಯಾನಕ್ಕೆ ಮತ್ತು ವಾಸ್ತವ್ಯಕ್ಕಾಗಿ ಸಕಲ ವ್ಯವಸ್ಥೆ ಕೈಗೊಂಡಿಳ್ಳಲಾಗಿದೆ. ಎರಡು ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಜೂನ್ 1ರಂದು ಕೊನೆಯ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬೀಳಲಿದೆ. ಸಂಜೆ 5 ಗಂಟೆ ಸುಮಾರಿಗೆ ಕನ್ಯಾಕುಮಾರಿಗೆ ಆಗಮಿಸಲಿರುವ ಮೋದಿ ಧ್ಯಾನ ನಡೆಸಲಿದ್ದಾರೆ. ಜೂನ್ 3 ರಂದು ಮಧ್ಯಾಹ್ನ 3 ಗಂಟೆಗೆ ತೆರಳಲಿದ್ದಾರೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮೋದಿ ಕನ್ಯಾಕುಮಾರಿ ಧ್ಯಾನ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು ಎಂದು ಡಿಎಂಕೆ ಒತ್ತಾಯಿಸಿದೆ.ಪ್ರವಾಸಿಗರು ಭೇಟಿ ನೀಡುವ ಸಮಯ ಇದಾಗಿದ್ದು, ಇಂತಹ ಸಂದರ್ಭದಲ್ಲಿ ಮೋದಿಯವರ ಧ್ಯಾನಕ್ಕೆ ಕನ್ಯಾಕುಮಾರಿಯಲ್ಲಿ ಅವಕಾಶ ನೀಡಬಾರದು ಎಂದು ಹೇಳಲಾಗಿದೆ.