ಛಿಂದ್ವಾರಾ: ಮಧ್ಯಪ್ರದೇಶದಲ್ಲಿ ಕಾರ್ಟೂನ್ ನೋಡುತ್ತಿದ್ದ 9 ವರ್ಷದ ಬಾಲಕನ ಕೈಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದೆ.
ಕೈಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ 9 ವರ್ಷದ ಬಾಲಕನಿಗೆ ಸುಟ್ಟ ಗಾಯಗಳಾಗಿವೆ. ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದಿಂದಾಗಿ ಬಾಲಕನ ಕೈ ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಚೌರೈ ಪ್ರದೇಶದ ಕಲ್ಕೋಟಿ ದೇವಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಾಲಕನ ತಂದೆ ಹರ್ದಯಾಲ್ ಸಿಂಗ್ ಪ್ರಕಾರ, ಅವರು ಮತ್ತು ಅವರ ಪತ್ನಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಕ ತನ್ನ ಸ್ನೇಹಿತರೊಂದಿಗೆ ಮನೆಯಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲು ಪ್ಲಗ್ ಇನ್ ಮಾಡಿದಾಗ ಇದ್ದಕ್ಕಿದ್ದಂತೆ ಸಾಧನ ಸ್ಫೋಟಗೊಂಡು ಬಾಲಕ ಗಾಯಗೊಂಡಿದ್ದಾನೆ. ಮತ್ತೊಂದು ಮಗು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಚಿಕಿತ್ಸೆ ಬಳಿಕ ಬಾಲಕನನ್ನು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಸ್ಥಳಾಂತರಿಸಲಾಗಿದ್ದು, ಸದ್ಯ ಆತನ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಚಿಂದ್ವಾರಾದ ಡಾ.ಅನುರಾಗ್ ವಿಶ್ವಕರ್ಮ ತಿಳಿಸಿದ್ದಾರೆ.