ಬೆಂಗಳೂರು : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 5 ಕೋಟಿ ರೂ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ & ಗ್ಯಾಂಗ್ ಅಂದರ್ ಆಗಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿ ಚೆನ್ನ ನಾಯಕ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಯಶವಂತಪುರ ಬಳಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ನಟಿಸಿ ವಂಚಿಸಿದ್ದನು ಎನ್ನಲಾಗಿದೆ.
ಘಟನೆ ಹಿನ್ನೆಲೆ
ಬೈಂದೂರು ಮೂಲದ ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ, ಹಿಂದೂ ನಾಯಕಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ 5 ಕೋಟಿ ವಂಚಿಸಿತ್ತು. ಚುನಾವಣೆ ವೇಳೆ ಟಿಕೆಟ್ ಸಿಗದಿದ್ದಾಗ ಉದ್ಯಮಿ ಹಣ ವಾಪಸ್ ಕೇಳಿದ್ದರು ಈ ವೇಳೆ ಚೈತ್ರಾ ಕುಂದಾಪುರ ತನಗೇ ಮೋಸ ಆಗಿದೆ ಎಂದು ಮತ್ತೊಂದು ಡ್ರಾಮಾ ಮಾಡಿದ್ದರು. ತಾನು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಉದ್ಯಮಿ ಗೋವಿಂದ ಬಾಬು, ಚೈತ್ರಾ ಹಾಗೂ ಗ್ಯಾಂಗ್ ಬಗ್ಗೆ ಸಾಕ್ಷಿ ಸಮೇತವಾಗಿ ಮಾಹಿತಿ ಸಂಗ್ರಹಿಸಿ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.