ಹರಿಪಾಡ್: ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಮನ್ನರಸಾಲ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ಮುಗಿಸಿ ಹಿಂತಿರುಗಲು ತಮ್ಮ ಅಧಿಕೃತ ವಾಹನ ಸಿಗದೆ ಅನಿರೀಕ್ಷಿತ ಪರಿಸ್ಥಿತಿ ಎದುರಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ಸಚಿವರು, ದೇವಸ್ಥಾನಕ್ಕೆ ಬಂದಿದ್ದ ಆಟೋ ರಿಕ್ಷಾ ಹತ್ತಿ ತೆರಳಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿಯ ಹನುಮದ್ ದೇವಸ್ಥಾನಕ್ಕೆ ಸರಿಸುಮಾರು ಒಂದೂವರೆ ಕಿಲೋಮೀಟರ್ ದೂರದವರೆಗೆ ಆಟೋದಲ್ಲಿ ಪ್ರಯಾಣಿಸಿದ್ದಾರೆ. ಅವರು ತೆರಳುತ್ತಿದ್ದಂತೆಯೇ ಅಧಿಕೃತ ವಾಹನ ಮತ್ತು ಪೊಲೀಸ್ ತಂಡವು ಸ್ಥಳಕ್ಕೆ ಬಂದಿವೆ. ಇದಾದ ಬಳಿಕ ಸಚಿವರು ಅಧಿಕೃತ ಕಾರ್ ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.
ಇದೇ ವೇಳೆ ಮನ್ನರಸಾಲ ದೇವಸ್ಥಾನದ ಆವರಣದಲ್ಲಿ ಸೇವಾ ಭಾರತಿ ಸೇವಾ ಕೇಂದ್ರ ಆರಂಭಿಸಲಾಗಿದ್ದು, ಸಚಿವರಿಂದ ಉದ್ಘಾಟನೆ ಮಾಡಿಸಲು ಸಂಘಟಕರು ಮುಂದಾಗಿದ್ದರು. ಆದರೆ, ಅದಕ್ಕೆ ಒಪ್ಪದ ಅವರು ಸ್ಥಳದಿಂದ ತೆರಳಿದ್ದಾರೆ.
ಗುರುವಾರ ಸಂಜೆ 6:30ಕ್ಕೆ ನಡೆದ ಸಮಾರಂಭದ ಬಳಿಕ ಈ ಘಟನೆ ನಡೆದಿದೆ. ಉದ್ಘಾಟನೆಯ ನಂತರ ಸಚಿವರು ದೇವಸ್ಥಾನಕ್ಕೆ ಭೇಟಿ ನೀಡಿ ‘ಮಹಾದೀಪಕಾಳಗ’ದಲ್ಲಿ ಪಾಲ್ಗೊಂಡರು. ಆದರೆ, ಹೊರಡುವ ಸಮಯ ಬಂದಾಗ ಕೆಲ ಹೊತ್ತು ಕಾದು ನಿಂತರೂ ಅಧಿಕೃತ ವಾಹನ ಬರಲಿಲ್ಲ. ಹೀಗಾಗಿ ಆಟೋದಲ್ಲೇ ಪ್ರಯಾಣ ಬೆಳೆಸಿದ್ದಾರೆ.