ಬೆಂಗಳೂರು: ನಗರ ಪ್ರದೇಶಗಳಿಗೆ ಜನ ವಲಸೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಸಹಕಾರ ಕೃಷಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.
ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಭೂಮಿ ಗುರುತಿಸಿ ಜಮೀನು ಇಲ್ಲದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಕುಟುಂಬಗಳಿಗೆ ನೀಡಿ ಸಹಕಾರ ಕೃಷಿ ಯೋಜನೆ ಜಾರಿಗೊಳಿಸಲಾಗುವುದು. ಸಹಕಾರ ಕೃಷಿ ಆರಂಭಕ್ಕೆ ಗುಂಪುಗಳನ್ನು ರಚಿಸಿ ಸಹಕಾರ ಸಂಘದ ಸ್ವರೂಪ ನೀಡಲಾಗುವುದು.
ಐದು ಜನರ ಕುಟುಂಬಕ್ಕೆ 1.67 ಎಕರೆ ಜಮೀನಿದ್ದರೆ ಜೀವನ ನಿರ್ವಹಣೆ ಮಾಡಬಹುದು ಎಂದು ಕೇಂದ್ರ ಸರ್ಕಾರದ ನಿಯಮಗಳು ಹೇಳುತ್ತವೆ. ಸರ್ಕಾರಿ ಭೂಮಿ ಇಲ್ಲವೇ ಕನಿಷ್ಠ 50 ಎಕರೆ ಜಮೀನು ದೊರೆಯುವ ಕಡೆ ಖರೀದಿ ಮಾಡಿ ಕುಟುಂಬಕ್ಕೆ ಎರಡು ಎಕರೆಯಂತೆ ನೀಡಿ ಪರಸ್ಪರ ಸಹಕಾರ ಕೃಷಿ ಕೈಗೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಜೀವನಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ SCSP/TSP ಅನುದಾನ ಇತರೆ ವರ್ಗದವರಿಗೆ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಒದಗಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ. ಮೊದಲಿಗೆ ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಿದ್ದು, ನಂತರ ಉಳಿದ ಜಿಲ್ಲೆಗಳಿಗೂ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ,ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.