ನೂತನ ಸಂಸತ್ ಭವನದಲ್ಲಿ ಸ್ಪೀಕರ್ ಕೂರುವ ಜಾಗದಲ್ಲಿ ಇಡಬೇಕೆಂದು ಉದ್ದೇಶಿಸಲಾಗಿರುವ ’ಸೆಂಗೋಲ್’ ರಾಜದಂಡದ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಡಾ. ಪದ್ಮಾ ಸುಬ್ರಹ್ಮಣ್ಯಂ ಇದೀಗ ಸುದ್ದಿಯಲ್ಲಿದ್ದಾರೆ.
“ತಮಿಳಿನ ತುಘ್ಲಕ್ ನಿಯತಕಾಲಿಕೆಯಲ್ಲಿ ಬಂದಿದ್ದ ಅಂಕಣವೊಂದರಲ್ಲಿ ಈ ಬಗ್ಗೆ ನೋಡಿದ್ದೆ. ಇದರ ಬಗ್ಗೆ ಕಂಚಿ ಮಹಾಸ್ವಾಮಿಗಳು ಏನು ಹೇಳಿದ್ದರು ಎಂಬುದನ್ನು ಪುಸ್ತಕವೊಂದರಲ್ಲಿ ಶ್ರೀ ಸುಬ್ರಹ್ಮಣ್ಯಂ ಅವರು ಪುಸ್ತಕವೊಂದರಲ್ಲಿ ಬರೆದಿದ್ದಾರೆ. ಇವರು ತೇವಾರಂಗಳ ಕುರಿತು ಮೂರು ಭಾಗಗಳಲ್ಲಿ ಬರೆದಿದ್ದಾರೆ. ಇಲ್ಲಿ ಅವರು ಸೆಂಗೋಲ್ ಕುರಿತಂತೆ ಕಂಚಿ ಮಹಾಸ್ವಾಮಿಗಳ ಉಲ್ಲೇಖ ಮಾಡಿದ್ದಾರೆ. ತಮಿಳು ಸಂಸ್ಕೃತಿಯಲ್ಲಿ ಸೆಂಗೋಲ್‌ಗೆ ಭಾರೀ ಮಹತ್ವವಿದೆ. ಛತ್ರಿ, ಸೆಂಗೋಲ್ ಹಾಗೂ ಸಿಂಹಾಸನಗಳು ನಿಮಗೆ ರಾಜನೆಂಬ ಪಟ್ಟ ನೀಡುತ್ತವೆ. ಸೆಂಗೋಲ್ ಎಂಬುದು ಬರೀ ಅಧಿಕಾರ ಮಾತ್ರವಲ್ಲ, ನ್ಯಾಯಪರತೆಯ ಸೂಚಕವೂ ಆಗಿದೆ. ಸೆಂಗೋಲ್ ಎಂಬುದು ಚೋಳರ ಕಾಲಕ್ಕಿಂತಲೂ ಮುಂಚಿನದ್ದಾಗಿದ್ದು, ತಮಿಳು ಪುರಾಣ ಶೀಲ ಪದಿಗಾರಂನಲ್ಲಿ ಉಲ್ಲೇಖ ಕಂಡಿದೆ. ಇಲ್ಲಿ ಚೇರಾ ರಾಜಮನೆತನದ ವಿಚಾರಗಳೂ ಬರುತ್ತವೆ,” ಎಂದು ರಾಜದಂಡದ ಕುರಿತಂತೆ ಪದ್ಮಾ ಸುಬ್ರಹ್ಮಣ್ಯಂ ವಿಸ್ತಾರವಾಗಿ ಹೇಳುತ್ತಾ ಸಾಗಿರುವ ಈ ಸಂದರ್ಶನದ ತುಣುಕು ಈಗ ಭಾರೀ ವೈರಲ್ ಆಗಿದೆ.
ಇದೇ ವೇಳೆ ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂಗೆ ಸೆಂಗೋಲ್ ಅನ್ನು ನೀಡಲಾಗಿದ್ದು, ಅದೀಗ ಅವರ ಪೂರ್ವಜರ ಮನೆಯಾದ ಅಲಹಾಬಾದ್‌ನ ಆನಂದ ಭವನದಲ್ಲಿದ್ದು, ಅದು ಅಲ್ಲಿಗೆ ಹೇಗೆ ಹೋಯಿತೆಂದು ಪ್ರಶ್ನಿಸಿದ್ದಾರೆ ಪದ್ಮಾ ಸುಬ್ರಹ್ಮಣ್ಯಂ.
ಚೋಳರ ರಾಜಗುರುಗಳಾಗಿದ್ದ ತಿರುವಾವೆದುರೈ ಅಧೀನಂಗಳು ಈ ರಾಜದಂಡವನ್ನು ರಾಜರ ಕೈಗಿಡುತ್ತಲೇ ಅಧಿಕಾರದ ಹಸ್ತಾಂತರ ಅಧಿಕೃತವಾಗಿ ಆಗುತ್ತಿತ್ತು ಎಂದು ತಿಳಿಸಿದ ಪದ್ಮಾ, ಇದೇ ರೀತಿ ಬ್ರಿಟೀಷರಿಂದ ಭಾರತದ ಅಧಿಕಾರ ವರ್ಗಾವಣೆಯ ವೇಳೆ ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂಗೆ ತಿರುವಾವೆದರೈ ಅಧೀನಂಗಳ ಕಿರಿಯರೊಬ್ಬರು ಬಂದು ಈ ರಾಜದಂಡದ ಹಸ್ತಾಂತರದ ಸಂಪ್ರದಾಯ ನೆರವೇರಿಸಿಕೊಟ್ಟರು ಎಂದು ಪದ್ಮಾ ತಿಳಿಸಿದ್ದಾರೆ.