ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಜೈ ಚೌಧರಿ ಈಗ ಅಮೆರಿಕದ ಅತ್ಯಂತ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದು, ಅವರ ಸಾಧನೆಯು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.
ಜೈ ಚೌಧರಿ ಬಾಲ್ಯದಲ್ಲಿ ಬಹಳ ಕಷ್ಟಪಟ್ಟು ಬೆಳೆದಿದ್ದಾರೆ. ಅವರು ವಾಸಿಸುತ್ತಿದ್ದ ಹಳ್ಳಿಯಲ್ಲಿ ವಿದ್ಯುತ್ ಮತ್ತು ನೀರಿನ ಸೌಲಭ್ಯಗಳೂ ಇರಲಿಲ್ಲ. ಹತ್ತನೇ ತರಗತಿಯವರೆಗೂ ಅವರು ಈ ಸೌಲಭ್ಯಗಳಿಲ್ಲದೆ ಬದುಕಿದ್ದರು.
ಸಾಧಾರಣ ಕುಟುಂಬದಲ್ಲಿ ಜನಿಸಿದ ಜೈ ಚೌಧರಿ, ತಮ್ಮ ಅಧ್ಯಯನದಲ್ಲಿ ತುಂಬಾ ಗಮನ ಹರಿಸಿದರು. ಐಐಟಿ-ಬಿಎಚ್‌ಯುದಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿಯನ್ನು ಪಡೆದು 1980 ರಲ್ಲಿ ಅಮೆರಿಕಕ್ಕೆ ತೆರಳಿ ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಮತ್ತು ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
2008 ರಲ್ಲಿ ಜೈ ಚೌಧರಿ ಅವರು ಸೈಬರ್ ಸೆಕ್ಯುರಿಟಿ ಕಂಪನಿಯಾದ ಝಿಸ್ಕೇಲರ್ ಅನ್ನು ಸ್ಥಾಪಿಸಿದ್ದು ಈ ಕಂಪನಿಯು 2018 ರಲ್ಲಿ ಮಾರುಕಟ್ಟೆಗೆ ಬಂದಿತು. ಇದಕ್ಕೂ ಮುನ್ನ ಅವರು ಸೆಕ್ಯೂರ್‌ಐಟಿ, ಕೋರ್‌ಹಾರ್ಬರ್, ಸೈಫರ್‌ಟ್ರಸ್ಟ್ ಮತ್ತು ಏರ್‌ಡಿಫೆನ್ಸ್ ಎಂಬ ನಾಲ್ಕು ತಂತ್ರಜ್ಞಾನ ಕಂಪನಿಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮಾರಾಟ ಮಾಡಿದ್ದರು.
ಇಂದು 65 ವರ್ಷ ವಯಸ್ಸಿನ ಜೈ ಚೌಧರಿ ಅಮೆರಿಕದ ನೆವಾಡಾದಲ್ಲಿ ವಾಸಿಸುತ್ತಿದ್ದಾರೆ. ಫೋರ್ಬ್ಸ್ ಪತ್ರಿಕೆಯ ಪ್ರಕಾರ ಅವರ ನಿವ್ವಳ ಆಸ್ತಿ 11.7 ಬಿಲಿಯನ್ ಡಾಲರ್ ಆಗಿದೆ. ಜೈ ಚೌಧರಿ ಅವರ ಜೀವನ ಕಥೆಯು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.