ಮುಂಬೈ: ಮೆಡಿಕ್ಲೈಮ್ ಪಾವತಿಗಳನ್ನು ಮೋಟಾರು ಅಪಘಾತ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮೆಡಿಕ್ಲೇಮ್ ಪಾಲಿಸಿ ಅಡಿಯಲ್ಲಿ ವ್ಯಕ್ತಿ ಪಡೆಯುವ ಹಣವನ್ನು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವೈದ್ಯಕೀಯ ವೆಚ್ಚಗಳಿಗಾಗಿ ನೀಡುವ ಪರಿಹಾರ ಮೊತ್ತದಿಂದ ಕಡಿತ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ಹಕ್ಕುದಾರ ಮತ್ತು ವಿಮಾ ಕಂಪನಿಗೆ ನಡುವಿನ ಗುತ್ತಿಗೆ ಒಪ್ಪಂದಕ್ಕೆ ಅನುಗುಣವಾಗಿ ಮೆಡಿಕಲ್ ಪಾಲಿಸಿ ಅಡಿಯಲ್ಲಿ ಹಣ ನೀಡಲಾಗುವುದು ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್, ಮಿಲಿಂದ್ ಜಾಧವ್, ಗೌರಿ ಗೋಡ್ಸೆ ಅವರಿದ್ದ ಪೂರ್ಣ ಪೀಠ ತಿಳಿಸಿದೆ.
ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ಈ ವಿಚಾರವಾಗಿ ಭಿನ್ನ ನಿಲುವು ಹೊಂದಿದ ಕಾರಣಕ್ಕೆ ವಿಷಯವನ್ನು ಪೂರ್ಣಪೀಠದ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿದ ಪೂರ್ಣಪೀಠ, ಮೋಟಾರ್ ಅಪಘಾತ ಕ್ಲೇಮುಗಳ ನ್ಯಾಯಮಂಡಳಿ ನ್ಯಾಯ ಸಮ್ಮತವಾಗಿ ಪರಿಹಾರವನ್ನು ಘೋಷಿಸುವ ಅಧಿಕಾರ ಹೊಂದಿದೆ ಮತ್ತು ಆ ರೀತಿ ಘೋಷಿಸುವ ಹೊಣೆಯನ್ನು ಹೊತ್ತಿದೆ ಎಂದು ಹೇಳಲಾಗಿದೆ.
ವೈದ್ಯಕೀಯ ವೆಚ್ಚಗಳಿಗೆ ನೀಡಿದ ಹಣ ಮಾತ್ರವೇ ಅಲ್ಲದೆ ಹೆಚ್ಚುವರಿಯಾಗಿ ಹಣಕಾಸು ಪರಿಹಾರವನ್ನು ನೀಡಬೇಕು ಎಂದು ನ್ಯಾಯಮಂಡಳಿ ನೀಡಿದ ಆದೇಶ ಪ್ರಶ್ನಿಸಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಪೂರ್ಣಪೀಠ ಈ ಆದೇಶ ನೀಡಿದೆ.
ಮೆಡಿಕಲ್ ಪಾಲಿಸಿ ಭಾಗವಾಗಿ ಪಡೆಯುವ ವಿಮಾ ಹಣದಲ್ಲಿ ವೈದ್ಯಕೀಯ ವೆಚ್ಚಗಳು ಕೂಡ ಸೇರುತ್ತವೆ ಎಂದು ಕಂಪನಿ ಹೇಳಿದ್ದು, ಇದರಿಂದ ಎರಡು ಬಾರಿ ಪರಿಹಾರ ನೀಡಿದಂತೆ ಆಗುತ್ತದೆ ಎಂದು ವಾದಿಸಿತ್ತು. ಆದರೆ, ಮೆಡಿಕ್ಲೇಮ್ ಮೊತ್ತ ವೈದ್ಯಕೀಯ ವೆಚ್ಚದಿಂದ ಕಡಿತ ಮಾಡುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಮೆಡಿಕ್ಲೇಮ್ ಪಾಲಿಸಿಯ ಅಡಿಯಲ್ಲಿ ಪಡೆದ ವಿಮಾ ಪಾವತಿಗಳನ್ನು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವೈದ್ಯಕೀಯ ವೆಚ್ಚಗಳಿಗೆ ನೀಡಲಾಗುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ. ಮೆಡಿಕ್ಲೇಮ್ ಪಾವತಿಗಳು ಪಾಲಿಸಿದಾರ ಮತ್ತು ವಿಮಾ ಕಂಪನಿಯ ನಡುವಿನ ಒಪ್ಪಂದದ ಒಪ್ಪಂದದಿಂದ ಉಂಟಾಗುತ್ತವೆ ಎಂದು ನ್ಯಾಯಾಲಯ ಒತ್ತಿಹೇಳಿದೆ.
ಇದು ಮೋಟಾರು ವಾಹನ ಅಪಘಾತದಿಂದ ಉಂಟಾದ ನಷ್ಟಗಳಿಗೆ ನೀಡಲಾಗುವ ಪರಿಹಾರಕ್ಕಿಂತ ಭಿನ್ನವಾಗಿದೆ. “ನಮ್ಮ ಅಭಿಪ್ರಾಯದಲ್ಲಿ, ಮೆಡಿಕ್ಲೈಮ್ ಪಾಲಿಸಿಯ ಅಡಿಯಲ್ಲಿ ಹಕ್ಕುದಾರರು ಪಡೆದ ಯಾವುದೇ ಮೊತ್ತದ ಕಡಿತವನ್ನು ಅನುಮತಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.