ಹೊಸಪೇಟೆ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ ಸರ್ಕಾರ ನಾಲ್ಕು ತಿಂಗಳಿಂದ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಕರು ಬಿಸಿಯೂಟಕ್ಕೆ ಪದಾರ್ಥ ಹೊಂದಿಸಲು ಪರದಾಡುವಂತಾಗಿದೆ.
ಸರ್ಕಾರ ಪ್ರತಿ ತಿಂಗಳು ಬಿಸಿಯೂಟ ಯೋಜನೆಗೆ ಅನುದಾನ ನೀಡುತ್ತದೆ. ಆದರೆ, ಹೂವಿನ ಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ಮೊಟ್ಟೆ, ತರಕಾರಿ, ಉಪ್ಪು, ಮಸಾಲೆ ಪದಾರ್ಥ ಖರೀದಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.
ಇವುಗಳ ಬೆಲೆ ಏರಿಕೆಯಾಗಿದೆ. ಕೆಲವು ಶಿಕ್ಷಕರು ಸ್ವಂತ ಹಣ ಖರ್ಚು ಮಾಡಿಕೊಂಡು ತರಕಾರಿ, ಮೊಟ್ಟೆ ಖರೀದಿಸಿ ಶಾಲೆಗೆ ತರುತ್ತಿದ್ದಾರೆ. ಮತ್ತೆ ಕೆಲವರು ತರಕಾರಿ ಅಂಗಡಿಗಳಲ್ಲಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹೊರೆಯಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಅಕ್ಕಿ, ಬೇಳೆ, ಎಣ್ಣೆ ಸರ್ಕಾರ ಪೂರೈಸುತ್ತದೆ. ತರಕಾರಿ, ಉಪ್ಪು, ಮಸಾಲೆ ಖರೀದಿಗೆ ಸರ್ಕಾರದಿಂದ ಹಣ ನೀಡಲಾಗುತ್ತದೆ. ಒಂದರಿಂದ ಐದನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 1.93 ರೂ., ಆರರಿಂದ ಹತ್ತನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 2.89 ರೂ. ನೀಡಲಿದ್ದು, ಪ್ರತಿ ವಿದ್ಯಾರ್ಥಿಗೆ ವಾರಕ್ಕೆ ಎರಡು ಮೊಟ್ಟೆ ನೀಡಲಾಗುತ್ತದೆ. ಇಷ್ಟು ಹಣವನ್ನು ಈಗ ಶಿಕ್ಷಕರು ಭರಿಸಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದಾರೆ. ಹಣ ಬಿಡುಗಡೆಯಾಗದೆ ಬಿಸಿಯೂಟ ನಿರ್ವಹಣೆ ಮಾಡುವುದು ಶಿಕ್ಷಕರಿಗೆ ತೊಂದರೆಯಾಗಿದೆ. ತಾಂತ್ರಿಕ ಅಡಚಣೆಯಿಂದ ಹಣ ಬಿಡುಗಡೆಯಾಗಿಲ್ಲವೆನ್ನಲಾಗಿದ್ದು, ಶೀಘ್ರವೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.