ಶಿವಮೊಗ್ಗ: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂಬ ಕೂಗು ಹೆಚ್ಚುತ್ತಲೇ ಇದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಶಿಕ್ಷಣ ಇಲಾಖೆಯಿಂದ ಯೋಜನೆ ಕೂಡ ಆರಂಭವಾಗಿದೆ. ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರಿ ಶಾಲೆಯ ಉಳಿವಿಗಾಗಿ ಮಹತ್ವದ ಹೆಜ್ಜೆಯಿಟ್ಟಿದ್ದು, ಮಾದರಿ ಕೆಲಸ ಮಾಡಿದ್ದಾರೆ.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಸರ್ಕಾರಿ ಶಾಲೆ ಅಭಿವೃದ್ಧಿಗೆ 10 ಲಕ್ಷ ರೂಪಾಯಿ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆಯಲ್ಲಿ ಓದಿದ ಸಾಧಕರು, ಉಳ್ಳವರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳ ಭವಿಷ್ಯವನ್ನೇ ಬದಲಾಯಿಸಬಹುದು. ನಾನು ಶಾಲೆಗೆ ನಿಡಿದ ದೇಣಿಗೆ 10 ಲಕ್ಷ ವಿರಬಹುದು ಆದರೆ ಮುಂದಿನ ದಿನಗಳಲ್ಲಿ ಇದು ಕೋಟಿಗೆ ವಿಸ್ತರಣೆಯಾಗಲಿ. ಇದರಿಂದ ಸರ್ಕಾರಿ ಶಾಲೆಗಳ ಏಳಿಗೆ ಆರಂಭವಾಗಲಿ ಎಂದಿದ್ದಾರೆ.
ಈ ಶಾಲೆಯಲ್ಲಿ ಅಕ್ಷರ ಕಲಿತ ನಮ್ಮ ತಂದೆ ಬಂಗಾರಪ್ಪ ರಾಜ್ಯದ ಭವಿಷ್ಯ ರೂಪಿಸಲು ಸಾಕ್ಷಿಯಾದರು. ಅವರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ. ನನಗೆ ಸರ್ಕಾರಿ ಶಾಲೆರ್ಯಲ್ಲಿ ಓದುವ ಅವಕಾಶ ಸಿಗದಿದ್ದಕ್ಕೆ ಬೇಸರವಿದೆ. ಆದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ಮಹದಾಸೆಯಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಎಲ್ಲರೂ ತಮ್ಮ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು ಆಗ ಸರ್ಕಾರಿ ಶಾಲೆಗಳು ಸುಧಾರಣೆಯಾಗುತ್ತವೆ. ಮುಂದಿನ ದಿನಗಳಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ 1 ಕೋಟಿ ದೆಣಿಗೆ ಹರಿದು ಬರುವ ನಿರೀಕ್ಷೆ ಇದೆ ಎಂದರು.
ಇದೇ ವೇಳೆ ಶಾಲೆಗೆ 10 ಲಕ್ಷ ದೇಣಿಗೆ, ಉತ್ತಮ ಕಲಿಕಾ ಪರಿಕರಗಳನ್ನು ಕೊಡುಗೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ.