ಮುಂಬೈ: ಮರಾಠಾ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ಶಾಸಕರೊಬ್ಬರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಮರಾಠಾ ಮಿಸಲಾತಿಗಾಗಿ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದಿದ್ದು, ಎನ್ ಸಿ ಪಿ ಶಾಸಕ ಪ್ರಕಾಶ್ ಸೋಲಂಕೆ ನಿವಾಸದ ಮೇಲೆ ದಾಳಿ ನಡೆಸಿ, ಮನೆಗೆ ಬೆಂಕಿ ಇಟ್ಟಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಶಾಸಕರ ಮನೆ ಧಗಧಗನೆ ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಿಗೆ ಮನೆ ತುಂಬ ವ್ಯಾಪಿಸಿದೆ. ಅದೃಷ್ಟವಶಾತ್ ಶಾಸಕರು ಹಾಗೂ ಕುಟುಂಬ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರಕಾಶ್ ಸೋಲಂಕೆ, ಈ ದಾಳಿ ನಡೆದ ವೇಳೆ ನಾನು ಮನೆಯಲ್ಲಿಯೇ ಇದ್ದೆ. ಅದೃಷ್ಟವಶಾತ್ ನಾನು ಹಾಗೂ ಕುಟುಂಬ ಸದಸ್ಯರು, ಸಿಬ್ಬಂದಿಗಳು ಬಚಾವಾಗಿದ್ದೇವೆ. ಸುರಕ್ಷಿತರಾಗಿದ್ದೇವೆ. ಆದರೆ ಮನೆ ಹಾಗೂ ಆಸ್ತಿಪಾಸ್ತಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮರಾಠಾ ಮೀಸಲಾತಿ ಹೋರಾಟ ಯಾವ ತಿರುವು ಪಡೆದುಕೊಳ್ಳುತ್ತಿದೆ ಎಂಬುದನ್ನು ಮೀಸಲಾತಿ ಹೋರಾಟಗಾರ ಮುಖಂಡ ಮನೋಜ್ ಜಾರಂಗೆ ಪಾಟೀಲ್ ಗಮನಹರಿಸಬೇಕು. ಈ ರೀತಿ ವರ್ತನೆಗಳು ಸೂಕ್ತವಲ್ಲ. ಮರಾಠಾ ಸಮುದಾಯಕ್ಕೆ ಶಾಶ್ವತ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.