
ಕಾರವಾರ: ಸಚಿವ ಮಂಕಾಳು ವೈದ್ಯ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಸಚಿವರ ವಿರುದ್ಧ ಭಟ್ಕಳ ಆರ್ ಟಿ ಐ ಕಾರ್ಯಕರ್ತರು ರಾಜ್ಯಪಾಲರು ಹಾಗೂ ಮುಖ್ಯ ಅರಣ್ಯಾಧಿಕಾರಿಗೆ ದೂರು ನೀಡಿದ್ದಾರೆ.
ಭಟ್ಕಳ ಆರ್ ಟಿಐ ಕಾರ್ಯಕರ್ತರಾದ ನಗೇಂದ್ರ ನಾಯ್ಕ್ ಹಾಗೂ ನಾಗೇಶ್ ನಾಯ್ಕ್ ಸಚಿವ ಮಂಕಾಳು ವೈದ್ಯ ವಿರುದ್ಧ ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗ ಸರ್ವೆ ನಂ: 600ರಲ್ಲಿ ಅಕ್ರಮವಾಗಿ ತಮ್ಮ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
2024 ಮೇ 18ರಂದು ಅರಣ್ಯ ಭೂಮಿ ಒತ್ತುವರಿ ಮಾಡಿ ಮಣ್ಣು ತೆಗೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಮಂಕಿ ಅರಣ್ಯ ವಲಯ ಇಲಾಖೆ ಅಧಿಕಾರಿಗಳು ಸಚಿವ ಮಂಕಾಳು ವೈದ್ಯ ಹೆಸರು ಕೈಬಿಟ್ಟು ಬೇರೆಯವರ ಹೆಸರಿನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸಚಿವರು ತಮ್ಮ ಪ್ರಭಾವ ಬಳಸಿ ಬೇರೆಯವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾಗಿ ಆರೋಪಿಸಿದ್ದಾರೆ.