ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ವಾಪಸ್ ಆಗುತ್ತಿದ್ದಾಗ ವಿದ್ಯಾರ್ಥಿಗಳು ತೆರಳುತ್ತಿದ್ದ ಆಟೋ ಭೀಕರ ಅಪಘಾತಕ್ಕೀಡಾಗಿದ್ದು 17 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಅರಕೆರೆ-ಮಹದೇವಪುರ ಬಳಿ ನಡೆದಿದೆ.
ನಿಯಂತ್ರಣ ತಪ್ಪಿ ಆಟೋ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದ್ದು, 17 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಗಳು ಶ್ರೀರಂಗಪಟ್ಟಣದ ಚಿಕ್ಕಅಂಕನಹಳ್ಳಿಯವರು ಎಂದು ತಿಳಿದುಬಂದಿದೆ.
ಮಹದೇವಪುರಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಹೋಗಿದ್ದರು. ಪರೀಕ್ಷೆ ಮುಗಿಸಿ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳು ವಿದ್ಯಾರ್ಥಿಗಳನ್ನು ಅರಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.