ಮೂಢನಂಬಿಕೆಯಿಂದ ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಆಕೆಯ ರಕ್ತವನ್ನು ‘ಶಿವಲಿಂಗ’ದ ಮೇಲೆ ಅರ್ಪಿಸಿ ತನ್ನ ಪ್ರಾಣ ತೆಗೆದುಕೊಳ್ಳಲು ಯತ್ನಿಸಿದ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನಂದಿನಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಕಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.
ಪೊಲೀಸ್ ಉಪವಿಭಾಗಾಧಿಕಾರಿ(ಧಮ್‌ಧಾ) ಸಂಜಯ್ ಪುಂಡೀರ್ ಪ್ರಕಾರ, 70 ವರ್ಷದ ರುಕ್ಮಣಿ ಗೋಸ್ವಾಮಿ, ತನ್ನ ಮೊಮ್ಮಗ ಗುಲ್ಶನ್ ಗೋಸ್ವಾಮಿ(30) ನೊಂದಿಗೆ ಶಿವ ದೇವಾಲಯದ ಬಳಿ ವಾಸಿಸುತ್ತಿದ್ದಳು. ಗುಲ್ಶನ್ ದೇವಸ್ಥಾನದಲ್ಲಿ ನಿಯಮಿತವಾಗಿ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಿದ್ದರು.
ಶನಿವಾರ ಸಂಜೆ, ಗುಲ್ಶನ್ ಅವರ ಮನೆಯೊಳಗೆ ತನ್ನ ಅಜ್ಜಿಯ ಮೇಲೆ ತ್ರಿಶೂಲದಿಂದ ಹಲ್ಲೆ ನಡೆಸಿದ್ದಾನೆ, ಅಜ್ಜಿಯನ್ನು ಕೊಂದ ನಂತರ ಆಕೆಯ ರಕ್ತವನ್ನು ಹತ್ತಿರದ ದೇವಸ್ಥಾನಕ್ಕೆ ಕೊಂಡೊಯ್ದು ಅದನ್ನು ‘ಶಿವಲಿಂಗ’ದ ಮೇಲೆ ಅರ್ಪಿಸಿದ್ದಾನೆ.
ನಂತರ ಗುಲ್ಶನ್ ಮನೆಗೆ ಹಿಂದಿರುಗಿ ಅದೇ ತ್ರಿಶೂಲವನ್ನು ತನ್ನ ಕುತ್ತಿಗೆಗೆ ಇರಿದುಕೊಂಡು ಗಂಭೀರವಾದ ಗಾಯ ಮಾಡಿಕೊಂಡಿದ್ದಾನೆ. ಈ ಭೀಕರ ಘಟನೆಯಿಂದ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ರುಕ್ಮಣಿ ಗೋಸ್ವಾಮಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಗುಲ್ಶನ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆತ ಪ್ರಸ್ತುತ ರಾಯ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ(AIIMS) ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣದ ಕುರಿತು ಮಾತನಾಡಿದ ಉಪವಿಭಾಗಾಧಿಕಾರಿ ಪುಂಡೀರ್, ಪ್ರಾಥಮಿಕ ಮಾಹಿತಿ ಪ್ರಕಾರ ಮೂಢನಂಬಿಕೆಯಿಂದ ಈ ಕೃತ್ವೆಸಗಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಈ ಘಟನೆಯ ಆಘಾತದಿಂದ ಸ್ಥಳೀಯ ಸಮುದಾಯ ತತ್ತರಿಸಿದೆ. ಅನೇಕ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. “ಗುಲ್ಶನ್ ಶಾಂತ ವ್ಯಕ್ತಿಯಾಗಿದ್ದು, ದೇವಾಲಯದ ಮೇಲಿನ ಭಕ್ತಿಗೆ ಹೆಸರುವಾಸಿಯಾಗಿದ್ದ. ಅವರು ಈ ರೀತಿ ಮಾಡಬಹುದೆಂದು ನಾವು ಊಹಿಸಿರಲಿಲ್ಲ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.