ಮನೆ ಖರೀದಿ ವಿಚಾರದಲ್ಲಿ 20 ವರ್ಷದ ಹಿಂದೆ 25.25 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದ ತಮಿಳುನಾಡಿನ ಪುಝುತಿವಕ್ಕಂ ನಿವಾಸಿಯೊಬ್ಬರಿಗೆ 20 ವರ್ಷದ ನಂತರ ನ್ಯಾಯ ಸಿಕ್ಕಿದೆ. ಎಸ್.ಕಂದಸಾಮಿ ಎಂಬಾತನಿಗೆ 25.25 ಲಕ್ಷ ರೂಪಾಯಿ ವಂಚಿಸಿ ವಕೀಲ ಮತ್ತು ಅವರ ಪತ್ನಿ ನಕಲಿ ದಾಖಲೆಗಳನ್ನು ಬಳಸಿ ಮನೆ ಮಾರಾಟ ಮಾಡಿದ್ದರು. ಮನೆ ಖರೀದಿಸಿದ 20 ವರ್ಷಗಳ ನಂತರ ಸ್ಥಳೀಯ ನ್ಯಾಯಾಲಯವು ಪ್ರಕರಣದ ಆರೋಪಿಗಳಿಗೆ ಮೇ 31 ರಂದು ಶಿಕ್ಷೆ ವಿಧಿಸಿ ಹಣವನ್ನು ಕಂದಸಾಮಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.
ಕಂದಸಾಮಿ ಅವರು 2004 ರಲ್ಲಿ ಪ್ರಾಪರ್ಟಿ ಏಜೆಂಟ್ ಎಂ ರವಿಚಂದ್ರನ್ ಅವರ ಸಹಾಯದಿಂದ ರೋಸರಿ ಜೆಸಿಂತಾ ಮತ್ತು ಅವರ ಪತಿ ಎನ್ ಅಮರನಾಥ್ ಅವರಿಂದ ವೆಲಚೇರಿಯಲ್ಲಿ ಮನೆಯೊಂದನ್ನು ಖರೀದಿಸಿದರು. ಮನೆಯನ್ನು ತನ್ನ ಸೋದರಳಿಯನ ಹೆಸರಿನಲ್ಲಿ ಅವರು ಖರೀದಿಸಿದ್ದರು.
ಆದಾಗ್ಯೂ ಕೆಲವು ವರ್ಷಗಳ ನಂತರ ಅವರ ಸೋದರಳಿಯ ಸತ್ಯವೊಂದನ್ನು ಕಂಡುಕೊಂಡಿದ್ದು, ಸುಬ್ರಮಣ್ಯಂ ಎಂಬ ವ್ಯಕ್ತಿಯು ಹರಾಜಿನಲ್ಲಿ ಸಾಲ ವಸೂಲಾತಿ ನ್ಯಾಯಮಂಡಳಿಯು ಮಾರಾಟ ಮಾಡಿದ ಮನೆ ಖರೀದಿಸಿದ್ದು, ಆ ಮನೆ ಅವರ ಮಾಲೀಕತ್ವದಲ್ಲಿದೆ ಎಂಬುದನ್ನ ತಿಳಿದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಕಂದಸಾಮಿ 2009ರಲ್ಲಿ ಚೆನ್ನೈ ಪೊಲೀಸರಿಗೆ ವಂಚನೆ ದೂರು ದಾಖಲಿಸಿದ್ದರು. ನಗರ ಪೊಲೀಸರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಅಮರನಾಥ್ ಮತ್ತು ಅವರ ಪತ್ನಿ ಸ್ಥಳೀಯ ಸಬ್‌ರಿಜಿಸ್ಟ್ರಾರ್‌ಗಳ ನಕಲಿ ಮುದ್ರೆ, ಸಹಿ ಬಳಸಿ ನಕಲಿ ಆಸ್ತಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ.
ದಂಪತಿ 43 ಲಕ್ಷ ರೂಪಾಯಿ ಸಾಲ ಪಡೆಯಲು ಬ್ಯಾಂಕ್ ಆಫ್ ಮಹಾರಾಷ್ಟ್ರದ ಮೀನಂಬಾಕ್ಕಂ ಶಾಖೆಯಲ್ಲಿ ಮನೆಯ ಮೂಲ ದಾಖಲೆಗಳನ್ನು ಅಡಮಾನ ಇಟ್ಟಿದ್ದರು . ಅವರು ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ, ಬ್ಯಾಂಕ್ ಮನೆಯನ್ನು ವಶಪಡಿಸಿಕೊಂಡು ನಂತರ ಅದನ್ನು ಹರಾಜು ಮಾಡಿತು. ಹರಾಜಾಗಿದ್ದ ಮನೆಯ ನಕಲಿ ದಾಖಲೆ ಸೃಷ್ಟಿಸಿ ಕಂದಸಾಮಿಗೆ ಮಾರಾಟ ಮಾಡಿದ್ದರು.
ದೂರಿನ ತನಿಖೆ ವೇಳೆ ತನಿಖಾಧಿಕಾರಿಗಳನ್ನು ವರ್ಗಾಯಿಸಲಾಗುತ್ತಿದ್ದ ಕಾರಣ ಪ್ರಕರಣದ ಚಾರ್ಜ್ ಶೀಟ್ ಅನ್ನು 18 ವರ್ಷಗಳ ವಿಳಂಬದ ನಂತರ 2022 ರಲ್ಲಿ ಸಲ್ಲಿಸಲಾಯಿತು
ವಿಚಾರಣೆಯ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್‌ಗಳ ದಾಖಲೆ, ಸಹಿ, ಸೀಲ್ ನಕಲಿ ಎಂದು ವಿಧಿವಿಜ್ಞಾನ ತಜ್ಞರು ಸಾಕ್ಷ್ಯ ನೀಡಿದರು. ದಂಪತಿಯ ಅಪರಾಧ ಸಾಬೀತಾದ ಬಳಿಕ ಸಿಸಿಬಿ ಮತ್ತು ಸಿಬಿ-ಸಿಐಡಿ ನ್ಯಾಯಾಲಯ ದಂಪತಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು 20,000 ರೂ ದಂಡ ಹಾಕಿದೆ. ಜೊತೆಗೆ 25.25 ಲಕ್ಷ ರೂ.ಗಳನ್ನು ಕಂದಸಾಮಿಗೆ ಹಿಂದಿರುಗಿಸುವಂತೆಯೂ ಆರೋಪಿಗಳಿಗೆ ಆದೇಶಿಸಿದೆ.