ಮುಂಬೈ: ಸೊಸೆಯನ್ನು ಕಾರ್ಪೆಟ್ ಮೇಲೆ ಮಲಗುವಂತೆ ಮಾಡುವುದು, ಟಿವಿ ನೋಡಲು ನಿರ್ಬಂಧ ಹೇರುವುದು ಕ್ರೌರ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ತೀರ್ಪು ನೀಡಿದೆ.
2003ರಲ್ಲಿನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವೊಂದರಲ್ಲಿ ಪತಿ ಹಾಗೂ ಆತನ ಕುಟುಂಬದ ಸದಸ್ಯರಿಗೆ ಅಧೀನ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಎಸ್. ವಾಗ್ವಾಸೆ ಅವರಿದ್ದ ಏಕಸದಸ್ಯ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಕೋರ್ಟ್ ಖುಲಾಸೆಗೊಳಿಸಿದೆ. ವಾದ -ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠ ಸೊಸೆಯನ್ನು ನಿಂದಿಸುವುದು, ಟಿವಿ ವೀಕ್ಷಣೆಗೆ ಅವಕಾಶ ನೀಡದಿರುವುದು, ದೇವಸ್ಥಾನಕ್ಕೆ ಏಕಾಂಗಿಯಾಗಿ ಹೋಗುವುದನ್ನು ನಿಷೇಧಿಸುವುದು, ಕಸಗುಡಿಸುವಂತೆ ಒತ್ತಾಯಿಸುವುದು, ಕಾರ್ಪೆಟ್ ಮೇಲೆ ಮಲಗುವಂತೆ ಮಾಡುವುದು ಕ್ರೌರ್ಯವಲ್ಲ. ಇಂತಹ ಆರೋಪಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಮತ್ತು 306ರ ಅಡಿಯಲ್ಲಿ ಕಠಿಣ ಕ್ರಮಗಳಿಗೆ ಸಮನಾಗಿರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.