ಮೈಸೂರು: ತೀವ್ರ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆಗೆ ಮೈಸೂರು ಕಮಿಷನರ್ ಷರತ್ತು ಬದ್ಧ ಅನುಮತಿ ನೀಡಿದ್ದು, ಮಹಿಷ ಉತ್ಸವ, ಚಾಮುಂಡಿ ಚಲೋಗೆ ಮಾತ್ರ ನಿಷೇಧಾಜ್ಞೆ ಅನ್ವಯ ಆಗಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ್ದೇವೆ. ಮಹಿಷ ದಸರಾ ಆಚರಣೆ ಮಾಡುವುದಾಗಿ ಮನವಿ ಪತ್ರ ಕೊಟ್ಟಿದ್ದರು. ಹಾಗಾಗಿ ಪುರಭವನದಲ್ಲಿ ಕಾರ್ಯಕ್ರಮ ನಡೆಸಲು ಕಂಡಿಷನ್ ಹಾಕಿ ಅನುಮತಿ ಕೊಟ್ಟಿದ್ದೇವೆ ಎಂದರು.
ಮಹಿಷ ದಸರಾ ಆಚರಣೆ ವಿರೋಧಿಸಿ ಚಾಮುಂಡಿ ಚಲೋ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮಹಿಷ ಉತ್ಸವ, ಚಾಮುಂಡಿ ಚಲೋಗೆ ಮಾತ್ರ ನಿಷೇಧಾಜ್ಞೆ ಅನ್ವಯ ಆಗಲಿದೆ. ಇನ್ನುಳಿದಂತೆ ಶಾಲಾ-ಕಾಲೇಜು, ಸಭೆ, ಸಮಾರಂಭ, ಮದುವೆ ಇವುಗಳಿಗೆ ಅನ್ವಯ ಆಗಲ್ಲ. ಕಾನೂನು ಸುವ್ಯವಸ್ಥೆ ಕೆಡಿಸುವ ಕೆಲಸವಾದರೆ ಮಾತ್ರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚಾಮುಂಡಿ ಬೆಟ್ಟ ಸಂಪರ್ಕಿಸುವ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ತಪಾಸಣೆ ನಡೆಸಿ ಚಾಮುಂಡಿ ಬೆಟ್ಟಕ್ಕೆ ತೆರಳು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.