ಟ್ರಾಕ್ಟರ್ ನ ಸೀಟ್ ಕವರ್‌ನ್ನು ಹರಿದು ಹಾನಿ ಮಾಡಿದ್ದಕ್ಕೆ ಬೀದಿನಾಯಿಯೊಂದನ್ನು ವ್ಯಕ್ತಿಯೊಬ್ಬರು ಬರ್ಬರವಾಗಿ ಕೊಂದ ಘಟನೆ ಮಹಾರಾಷ್ಟ್ರದ ಜಲಗಾಂವ್‌ನ ಪರೋಲಾದಲ್ಲಿ ನಡೆದಿದೆ. ನಾಯಿಗೆ ಹಿಂಸೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ತನ್ನದೇ ವಾಹನಕ್ಕೆ ನೇತು ಹಾಕಿ ಕೊಂದು ಹಾಕಿದ ಘಟನೆ ಸ್ಥಳೀಯರನ್ನೆ ಬೆಚ್ಚಿ ಬೀಳಿಸಿದೆ. ಇದರ ವಿರುದ್ಧ ಧ್ವನಿ ಎತ್ತಿದ ಜನ ಈ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಕ್ತಿಯ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸುವುದರ ಜೊತೆ ಬೀದಿನಾಯಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಫೈಟ್ ಎಗ್ಯೆನ್ಸ್ಟ್ ಅ್ಯನಿಮಲ್ ಕ್ರೂಯಾಲಿಟಿಸ್ (FAAC) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆ ವ್ಯಕ್ತಿ ತನ್ನ ಟ್ರ್ಯಾಕ್ಟರ್‌ನ ಸೀಟ್ ಕವರನ್ನು ಹರಿದು ಹಾಕಿದ ನಾಯಿಯನ್ನು ಜೀವಂತವಾಗಿ ಹಿಡಿದಿದ್ದಾನೆ. ಬಳಿಕ ಅದನ್ನು ಸಾಯಿಸಿದ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ಕೃತ್ಯವನ್ನು ಖಂಡಿಸಿರುವ ಅವರು ಸೀಟ್‌ಗಿಂತ ನಾಯಿಯ ಪ್ರಾಣಕ್ಕೆ ಬೆಲೆ ಕಡಿಮೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವೀಡಿಯೊದಲ್ಲಿ ಕರುಣೆಯೆ ಇಲ್ಲದ ಆ ವ್ಯಕ್ತಿ ತನ್ನ ಟ್ರ್ಯಾಕ್ಟರ್‌ಗೆ ನಾಯಿಯನ್ನು ನೇತುಹಾಕಿ ಅದು ಪ್ರಾಣ ಬಿಟ್ಟ ನಂತರ ಅದನ್ನು ನೆಲದ ಮೇಲೆ ಬಿಡುತ್ತಿರುವುದು ಕಂಡು ಬರುತ್ತದೆ. ಈ ಘಟನೆ ನೋಡಿ ಸ್ಥಳದಲ್ಲಿ ಜಮಾವಣೆಯಾದ ಜನರ ಆ ವ್ಯಕ್ತಿಯನ್ನು ಪ್ರಶ್ನಿಸುತ್ತಾರೆ. ಜೊತೆಗೆ ಯಾರು ಒಪ್ಪದಂತಹ ಈ ಕೃತ್ಯ ಎಸಗಿದಕ್ಕಾಗಿ ಅವನನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅವನು ನಾಯಿಯನ್ನು ಜೀವಂತವಾಗಿ ಸಾಯಿಸಿದ ಪಾಪಿ ವ್ಯಕ್ತಿ ಎಂದು ಹೇಳುತ್ತಿರುವ ಧ್ವನಿ ಕೇಳಿಬಂದಿದೆ.