ಗುರುವಾರದಂದು ಮುಸ್ಲಿಂ ಬಾಂಧವರು ದೇಶದಾದ್ಯಂತ ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಸಂಭ್ರಮದಿಂದ ಬಕ್ರೀದ್ ಆಚರಣೆ ಮಾಡಿದ್ದು, ಇದರ ಮಧ್ಯೆ ‘love Pakistan’ ಎಂದು ಬರೆದಿದ್ದ ಬಲೂನ್ ಮಾರಾಟ ಮಾಡುತ್ತಿದ್ದ ಅಜಯ್ ಪವಾರ್ ಎಂಬವನನ್ನು ಮುಸ್ಲಿಂ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೊಲ್ಲಾಪುರದ ಹೊಟ್ಗಿ ರಸ್ತೆಯಲ್ಲಿರುವ ಶಾ ಆಲಂಗೀರ್ ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಮುಸ್ಲಿಂ ಬಾಂಧವರು ನೆರೆದಿದ್ದು, ಈ ಸಂದರ್ಭದಲ್ಲಿ ಅಜಯ್ ಪವಾರ್ ಮಾರಾಟ ಮಾಡುತ್ತಿದ್ದ ಬಲೂನ್ ಒಂದರ ಮೇಲೆ ‘love Pakistan’ ಎಂದು ಬರೆದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆತನನ್ನು ಹಿಡಿದ ಮುಸ್ಲಿಂ ಯುವಕರು ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಕ್ರೀದ್ ಸಂದರ್ಭದಲ್ಲಿ ಬೇಕೆಂದೇ ವಿವಾದ ಸೃಷ್ಟಿಸಲು ಕೆಲವರು ಇದನ್ನು ಮಾಡಿದ್ದಾರೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದು, ಒಂದೊಮ್ಮೆ ಇದರ ಮೇಲಿನ ಬರಹವನ್ನು ಅರಿಯದೆ ಯಾರಾದರೂ ಮುಸ್ಲಿಂ ಬಾಲಕ ಬಲೂನ್ ಖರೀದಿಸಿ ಕೈಯಲ್ಲಿ ಹಿಡಿದುಕೊಂಡಿದ್ದರೆ ದೊಡ್ಡ ವಿವಾದ ಮಾಡುತ್ತಿದ್ದರು. ಹೀಗಾಗಿ ಇಂತಹ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.