ಮುಂಬೈ: ನಿಗದಿತ ಸಮಯದಲ್ಲೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಅಕ್ಟೋಬರ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ದಿನಾಂಕ ಘೋಷಣೆ ಆಗಬಹುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುಳಿವು ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೈಗೊಂಡ ಪೂರ್ವ ಸಿದ್ಧತೆ ಪರಿಶೀಲಿಸಲು ಮುಂಬೈಗೆ ಭೇಟಿ ನೀಡಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ಅಧಿಕಾರಿಗಳು ಮತ್ತು ಇಬ್ಬರು ಸಹಾಯಕ ಆಯುಕ್ತರ ಜೊತೆಗೂಡಿ ಸಿದ್ಧತೆ ಪರಿಶೀಲಿಸಿದ ರಾಜೀವ್ ಕುಮಾರ್, ಮುಕ್ತ, ನ್ಯಾಯ ಸಮ್ಮತ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಗತ್ಯ ಇರುವ ಸಿದ್ಧತೆ ರೂಪಿಸಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಅವಧಿ ನ. 26ಕ್ಕೆ ಅಂತ್ಯವಾಗಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯಲಿದೆ. ಅಕ್ಟೋಬರ್ ನಲ್ಲಿ ದಿನಾಂಕ ಘೋಷಣೆ ಮಾಡಲಾಗುತ್ತದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 54 ಕ್ಷೇತ್ರಗಳು ಎಸ್ಸಿ, ಎಸ್ಟಿ ವರ್ಗಕ್ಕೆ ಮೀಸಲಾಗಿವೆ. ಒಟ್ಟು 9.59 ಕೋಟಿ ಮತದಾರರು ಅರ್ಹತೆ ಪಡೆದಿದ್ದಾರೆ. 20 ಲಕ್ಷ ಮಂದಿ ಮೊದಲ ಸಲ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.