
ಚಿತ್ರದುರ್ಗ: ಮಹಾರಾಷ್ಟ್ರ ಬಸ್ ತಡೆದು ಚಾಲಕನ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಚಿತ್ರದುರ್ಗ ಜಿಲ್ಲೆ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿ ಮಾತಾಡಲು ಬರಲ್ಲ ಎಂದು ಹೇಳಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲೂಕು ಗುಯಿಲಾಳ ಟೋಲ್ ನಲ್ಲಿ ಮಹಾರಾಷ್ಟ್ರ ಬಸ್ ತಡೆದು ಚಾಲಕನಿಗೆ ಮಸಿ ಬಳಿದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಐಮಂಗಲ ಠಾಣೆ ಪೊಲೀಸರು ಶನಿವಾರ 10 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ತಡೆದ ನವನಿರ್ಮಾಣ ಸೇವೆ ಕಾರ್ಯಕರ್ತರು ಇಡೀ ಬಸ್ ಗೆ ಕಪ್ಪು ಬಣ್ಣದ ಸ್ಪ್ರೇ ಮಾಡಿ, ಜೈ ಕರ್ನಾಟಕ ಜೈ ಕನ್ನಡ ಬೆಳಗಾವಿ ನಮ್ಮದು ಮರಾಠಿಗರು ಪುಂಡಾಟಿಕೆ ನಿಲ್ಲಿಸಬೇಕು ಎಂದು ಬರೆದಿದ್ದು, ಬಸ್ ಚಾಲಕ ಹರಿ ಜಾದವ್ ಮುಖಕ್ಕೆ ಮಸಿ ಬಳಿದಿದ್ದರು. ಚಾಲಕನ ದೂರು ಆಧರಿಸಿ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.