ವೇಶ್ಯಾವಾಟಿಕೆ ನಡೆಸುತ್ತಿರುವವರಿಗೆ ರಕ್ಷಣೆ ಕೋರಿ ಅರ್ಜಿದಾರರೊಬ್ಬರು ಅರ್ಜಿ ಸಲ್ಲಿಸಿರುವುದನ್ನು ತಿಳಿದು ಮದ್ರಾಸ್ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್‌ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದು, ಪೊಲೀಸರು ದಾಳಿ ನಡೆಸುತ್ತಿದ್ದಾರೆ, ಅದಕ್ಕೆ ರಕ್ಷಣೆ ಬೇಕೆಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಲೇಂಧಿ, ಅರ್ಜಿದಾರರಿಗೆ 10,000 ರೂಪಾಯಿ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಲ್ಲದೆ ಅರ್ಜಿದಾರರ ವಕೀಲರ ದಾಖಲೆ ಪರಿಶೀಲನೆ ಮಾಡುವಂತೆ ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್‌ಗಳಿಗೆ ಸೂಚಿಸಿದ್ದಾರೆ.
ಜುಲೈ 5 ರಂದು ನೀಡಿದ ಆದೇಶದಲ್ಲಿ, ಏಕಸದಸ್ಯ ನ್ಯಾಯಾಧೀಶರು, ಸಮಾಜದಲ್ಲಿ ವಕೀಲರ ಪ್ರತಿಷ್ಠೆ ಕುಸಿಯುತ್ತಿರುವ ಬಗ್ಗೆ ಬಾರ್ ಕೌನ್ಸಿಲ್ ಗಮನಹರಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ. ವಕೀಲರ ಮಂಡಳಿಯು ಪ್ರತಿಷ್ಠಿತ ಕಾಲೇಜುಗಳ ಸದಸ್ಯರನ್ನು ಮಾತ್ರ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅರ್ಜಿದಾರರಾದ ರಾಜಾ ಮುರುಗನ್ ಅವರು ಹೈಕೋರ್ಟ್‌ನಲ್ಲಿ “ಫ್ರೆಂಡ್ಸ್ ಫಾರ್ ಎವರ್ ಟ್ರಸ್ಟ್” ಎಂಬ ಟ್ರಸ್ಟ್‌ನ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ. ಈ ಸಂಸ್ಥೆ ಮುಖ್ಯ ಉದ್ದೇಶ ವಯಸ್ಕರ ಮನರಂಜನೆ ಮತ್ತು ಇತರ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವುದು. ಆದ್ರೆ ಸ್ಥಳೀಯ ಪೊಲೀಸರು ಇದ್ರ ಮೇಲೆ ದಾಳಿ ಮಾಡಿದ್ದಾರೆ ಮತ್ತು ಚಟುವಟಿಕೆಗಳನ್ನು ನಡೆಸದಂತೆ ತಡೆಯುತ್ತಿದ್ದಾರೆ ಎಂದು ಮುರುಗನ್ ಅರ್ಜಿಯಲ್ಲಿ ಹೇಳಿದ್ದರು. ಅಲ್ಲದೆ ತಮಿಳುನಾಡು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆಯು ಲೈಂಗಿಕ ಕೆಲಸವನ್ನು ಕಾನೂನುಬಾಹಿರವಲ್ಲ ಎನ್ನುತ್ತದೆ ಎಂದು ಮುರುಗನ್ ವಾದಿಸಿದ್ದರು.
ಆದರೆ ಅರ್ಜಿದಾರರು ಟಿಎನ್ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಓದಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಈ ಕಾನೂನುಗಳು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸಲು ಮತ್ತು ಪುನರ್ವಸತಿ ಉದ್ದೇಶವಿದೆ. ವೇಶ್ಯಾಗೃಹವನ್ನು ನಡೆಸುವುದು ಕಾನೂನುಬದ್ಧ ಎಂದು ಎಲ್ಲೂ ಹೇಳಿಲ್ಲ.