ಬೆಂಗಳೂರು: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ, ಪುನಶ್ಚೇತನಗೊಳಿಸುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಉತ್ತರ ನೀಡಿದ ಸಚಿವರು, ಮೈಸೂರು ಮಹಾರಾಜರಿಂದ ಆರಂಭವಾಗಿದ್ದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಲು ಎಲ್ಲಾ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ. ವಿಐಎಸ್ಎಲ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪ್ರಯತ್ನ ಕೈಗೊಂಡಿದ್ದು, ಕಾರ್ಖಾನೆ ಕಾರ್ಯಾಚರಣೆ ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಾಸಕ ಸಂಗಮೇಶ್, ರಾಜ್ಯ ಸರ್ಕಾರಿ ಸ್ವಾಮ್ಯದಲ್ಲಿದ್ದ ಕಾರ್ಖಾನೆಯನ್ನು 1989 ರಲ್ಲಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದ್ದು, ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಮುಚ್ಚುತ್ತಿದೆ. ಎಂದು ದೂರಿದರು.
ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್ ಮಾತನಾಡಿ, ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ವಿಐಎಸ್ಎಲ್ ಮುಚ್ಚಲು ಹೊರಟಿದ್ದು, ಇದಕ್ಕೆ ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಆಸ್ತಿಯಾಗಿರುವ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಿ ಮುಂದುವರಿಸಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚುವ ಕೆಲಸ ಆಗಬಾರದು. ಸರ್ಕಾರ ಅಗತ್ಯ ಕ್ರಮ ಕೈಗೊಂಡು ಕಾರ್ಖಾನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಖಾನೆ ಮುಚ್ಚುವ ಉದ್ದೇಶ ನಮಗಿಲ್ಲ. ಕಾರ್ಖಾನೆ ಮುಚ್ಚಬೇಕು ಎನ್ನುವ ಪ್ರಸ್ತಾವನೆ ತಂದಿದ್ದೇ ಕಾಂಗ್ರೆಸ್ ಪಕ್ಷ ಎಂದು ಹೇಳಿದ ಸಚಿವ ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿಯಲ್ಲಿ ಅದಿರು ಗಣಿಗಾರಿಕೆಗೆ 4 ಎಕರೆ ಜಾಗ ನೀಡಿದ್ದೇವೆ. ಕಾರ್ಖಾನೆ ಮುನ್ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.