
ಶಿವಮೊಗ್ಗ: ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳ ಹೊರೆ ತಗ್ಗಿಸಲು ಸರ್ಕಾರ ವಿನೂತನ ಕ್ರಮ ಕೈಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಸಿದ್ಲೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪುಸ್ತಕಗಳಿಂದ ಭಾರ ಹೆಚ್ಚಾಗಿದೆ. ಸ್ಕೂಲ್ ಬ್ಯಾಗ್ ಹೊರೆ ಇಳಿಸಲು ಪುಸ್ತಕಗಳನ್ನು ವಿಭಾಗ ಮಾಡಲಾಗುತ್ತದೆ. ಅಧ್ಯಾಯಗಳನ್ನು ವಿಭಾಗಿಸಿ ವರ್ಷದ ಎರಡು ಅವಧಿಗೆ ಮೊದಲಾರ್ಧ, ದ್ವಿತೀಯಾರ್ಧ ರೀತಿಯಲ್ಲಿ ಪುಸ್ತಕಗಳನ್ನು ವಿತರಿಸಲಾಗುತ್ತದೆ. ನೋಟ್ ಪುಸ್ತಕಗಳ ಬದಲಿಗೆ ನೋಟ್ ಶೀಟ್ ಗಳನ್ನು ಮುಂದಿನ ವರ್ಷದಿಂದ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಶಾಲೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಎಲ್ಲಾ ಶಾಲೆಗಳಿಗೂ ಕಂಪ್ಯೂಟರ್ ನೀಡಲಾಗುವುದು. ಮೂಲ ಸೌಕರ್ಯ ಒದಗಿಸಲಾಗುವುದು. ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳೆಗೆ ಸಂಜೆ ವೇಳೆ ಸ್ಪೆಷಲ್ ಕ್ಲಾಸ್ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ, ಹಾಲು, ವಾರಕ್ಕೆ ಎರಡು ಸಲ ಮೊಟ್ಟೆ, ಬುಕ್ಸ್, ಶೂಗಳನ್ನು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಗಿ ಮಾಲ್ಟ್ ನೀಡಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ,