ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿನ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು. ವಿಜಯದಶಮಿ ದಿನ ಒಂದು ಮಾತು ಹೇಳುತ್ತೇನೆ ಬಿಎಸ್ ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಬಿಜೆಪಿಯಲ್ಲಿನ ಸರ್ವಾದಿಕಾರಿ ಧೋರಣೆ ಕೊನೆಯಾಗಬೇಕು. ನಾವು ಮಾತನಡಿದ್ರೆ ಪಕ್ಷ ವಿರೋಧಿ ಅಂತಾರೆ, ಅವರು ಮಾತನಾಡಿದ್ರೆ ಪಕ್ಷ ಸಂಘಟನೆ. ಎಂಎಲ್ ಸಿ ಹಾಗೂ ರಾಜ್ಯಸಭಾ ಸ್ಥಾನವನ್ನೂ ಅವರು ಹೇಳಿದವರಿಗೆ ಕೊಡ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಕ್ಕೆ ಯಡಿಯೂರಪ್ಪನವರಂತಹ ಜಾತ್ಯಾತೀತ ಹಾಗೂ ಸಮರ್ಥ ನಾಯಕ ಬೇಕು. ರಾಜ್ಯದಲ್ಲಿ ಬಿಎಸ್ ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಸೂಕ್ತ. ಬಿಎಸ್ ವೈ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಅವರ ಹಿಂದೆ ನಿಲ್ತಾರೆ ಎಂದು ಹೇಳಿದರು.
ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಮೊನ್ನೆ ಚುನಾವಣೆ ವೇಳೆ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಹಳಬರ ಕಾಲು ಏನಾದ್ರೂ ಬಿದ್ದು ಹೋಗಿದೆಯಾ? ಚುನಾವಣೆ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕಿತ್ತು. ಆದರೆ ಹಾಗೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.