ಬೆಂಗಳೂರು: ಮೈಸೂರು ಲ್ಯಾಂಪ್ಸ್ ಕಂಪನಿಯನ್ನು ಸಂಪೂರ್ಣ ಸರ್ಕಾರಿ ಸಂಸ್ಥೆಯನ್ನಾಗಿಸಲು ಒತ್ತು ನೀಡಲಾಗುವುದು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಶೇಕಡ 5.6 ರಷ್ಟು ಷೇರುಗಳು ಖಾಸಗಿಯವರ ಒಡೆತನದಲ್ಲಿವೆ. ಆ ಷೇರುಗಳನ್ನು ಸರ್ಕಾರವೇ ಖರೀದಿಸಿ ಶೇಕಡ 100ರಷ್ಟು ಸರ್ಕಾರಿ ಸಂಸ್ಥೆಯಾಗಿ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.
ಮೈಸೂರು ಲ್ಯಾಂಪ್ಸ್ ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯಾಗಿ ಮಾಡಿದ ನಂತರ, ಅದರ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು. ಅದರ ಆಸ್ತಿ ಖಾಸಗಿ ವ್ಯಕ್ತಿಗಳ, ಸಂಸ್ಥೆಗಳ ಪಾಲಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.