
ಬೆಂಗಳೂರು: ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದರಿಂದ ಪೋಷಕರ ಅಕ್ರಮ ಬಂಧನದಲ್ಲಿದ್ದ ಯುವತಿಗೆ ಪಿಜಿ ವಾಸದಲ್ಲಿರಲು ಹೈಕೋರ್ಟ್ ಅಸ್ತು ಎಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಯುವತಿಯನ್ನು ಆಕೆಯ ಪೋಷಕರು ಅಕ್ರಮ ಬಂಧನದಲ್ಲಿ ಇಟ್ಟಿರುವುದಾಗಿ ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪೋಷಕರ ಅಕ್ರಮ ಬಂಧನದಲ್ಲಿದ್ದ ಯುವತಿಗೆ ತನ್ನಿಷ್ಟದ ಜಾಗದಲ್ಲಿ ಅಂದರೆ ಪಿಜಿಯಲ್ಲಿ ವಾಸವಾಗಿರಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.
2023ರ ಮೇ 11ರಂದು ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಮೇ 16ರವರೆಗೆ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ಯುವತಿಗೆ ವ್ಯವಸ್ಥೆ ಮಾಡಲಾಗಿತ್ತು. ಮೇ 16ರಂದು ಮತ್ತೆ ಅರ್ಜಿ ವಿಚಾರಣೆ ನಡೆದು ಯುವತಿ ನ್ಯಾಯಾಲಯಕ್ಕೆ ಹಾಜರಾಗಿ ತನಗೆ 24 ವರ್ಷವಾಗಿದ್ದು, ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪೋಷಕರೊಂದಿಗೆ ಹೋಗಲು ಇಷ್ಟವಿಲ್ಲ. ತಾನು ತಂಗಿರುವ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲ. ತಾನು ಇಷ್ಟಪಡುವ ಪಿಜಿಯಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕು. ಆ ಜಾಗ ನನಗೆ ಸುರಕ್ಷಿತವಾಗಿದೆ. ನನಗೆ ಯಾವುದೇ ಪೊಲೀಸ್ ರಕ್ಷಣೆ ಕೂಡ ಬೇಡವೆಂದು ತಿಳಿಸಿದ್ದಾಳೆ.
ಇದನ್ನು ಒಪ್ಪಿದ ನ್ಯಾಯಮೂರ್ತಿಗಳಾದ ಹೆಚ್.ಟಿ. ನರೇಂದ್ರಪ್ರಸಾದ್, ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಯುವತಿ ಇಚ್ಚೆ ಪಟ್ಟ ಜಾಗದಲ್ಲಿ ನೆಲೆಸಲು ಅನುಮತಿ ನೀಡಿದೆ. ಯುವತಿಗೆ ಯಾವುದೇ ಸಮಸ್ಯೆ ಎದುರಾದರೂ ಸಮೀಪದ ಪೊಲೀಸ್ ಠಾಣೆ ಮೊರೆ ಹೋಗಬಹುದು. ಸಂಬಂಧಿಸಿದ ಪೊಲೀಸರು ಯುವತಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ನಿರ್ದೇಶಿಸಿದೆ.
ಯುವತಿಯ ತಂದೆ ಪರ ವಕೀಲರು ಅರ್ಜಿದಾರ ಯುವಕನೊಂದಿಗೆ ಚರ್ಚಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದು, ಇದನ್ನು ಪುರಸ್ಕರಿಸಿದ ನ್ಯಾಯಪೀಠ ಮೇ 22 ರವರೆಗೆ ಸಮಯ ಅವಕಾಶ ಕಲ್ಪಿಸಿ ವಿಚಾರಣೆ ಮುಂದುವಡಿದೆ. ಅಂದು ವಿಚಾರಣೆಗೆ ಯುವತಿ ಕೋರ್ಟ್ ಮುಂದೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ.