
ಭಟ್ಕಳ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ನಡೆದಿದೆ.
ನಿಖಿತಾ ಮಹಾಬಲೇಶ್ವರ ಗೊಂಡ (23) ಮೃತ ಯುವತಿ. ಕಾರ್ಗಲ್ ಮೂಲದವರು. ಬೈಕ್ ನಲ್ಲಿ ಮೂವರು ಭಟ್ಕಳದಿಂದ ಶಿರಾಲಿಗೆ ತೆರಳುತ್ತಿದ್ದರು. ಭಟ್ಕಳ ಪಟ್ಟಣ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು, ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಬೈಕ್ ನಲ್ಲಿದ್ದ ಗಣೇಶ್ ಗೊಂಡ (35) ಹಾಗೂ ಗಿರಿಜಾ ಗೊಂಡ (45) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.