ಮಥುರಾ ಸಂಸದೀಯ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಭ್ಯರ್ಥಿ ಹೇಮಾ ಮಾಲಿನಿ ಅವರು ಸುಮಾರು 297 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಇದು ಕಳೆದ 5 ವರ್ಷಗಳಲ್ಲಿ ಸುಮಾರು 15% ರಷ್ಟು ಹೆಚ್ಚಾಗಿದೆ. ಈ ಪೈಕಿ 129 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅವರ ಹೆಸರಿನಲ್ಲಿ ನೋಂದಣಿಯಾಗಿದ್ದು, 168 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅವರ ಪತಿ ಧರ್ಮೇಂದ್ರ ಹೆಸರಿನಲ್ಲಿದೆ.
2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಘೋಷಿಸಲಾದ ಆಸ್ತಿಯೊಂದಿಗೆ ಹೋಲಿಕೆ ಮಾಡಿದರೆ, ಹೇಮಾ ಅವರ ಆಸ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ 48 ಕೋಟಿ ರೂಪಾಯಿಗಳ ಹೆಚ್ಚಳವಾಗಿರುವುದ ಕಂಡು ಬಂದಿದೆ. ಅವರು ಹಿಂದಿನ ಚುನಾವಣೆಗಳಲ್ಲಿ 249 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಹೇಮಾ ಮಾಲಿನಿ ಉದಯಪುರದ ಪದಂಪತ್ ಸಿಂಘಾನಿಯಾ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ.ಪದವೀಧರರಾಗಿದ್ದಾರೆ.
ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ. ಕಲಾವಿದೆಯಾಗಿ ಅವರ ವೃತ್ತಿಯ ಹೊರತಾಗಿ, ಅವರ ಆದಾಯದ ಮೂಲಗಳು ವ್ಯಾಪಾರ, ಬಾಡಿಗೆ ಮತ್ತು ಬಡ್ಡಿಯನ್ನು ಒಳಗೊಂಡಿವೆ. ಸದ್ಯ ಹೇಮಾ ಮಾಲಿನಿ ಬಳಿ 13.52 ಲಕ್ಷ ನಗದು ಇದ್ದರೆ, ಪತಿ ಧರ್ಮೇಂದ್ರ ಬಳಿ 43.19 ಲಕ್ಷ ರೂ. ಅವರು ಬ್ಯಾಂಕ್‌ಗಳಲ್ಲಿ 1.13 ಕೋಟಿ ರೂಪಾಯಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ 4.28 ಕೋಟಿ ರೂಪಾಯಿ ಠೇವಣಿ ಹೊಂದಿದ್ದಾರೆ.
ಹೆಚ್ಚುವರಿಯಾಗಿ, ಅವರು 2.96 ಕೋಟಿ ಮೌಲ್ಯದ ಪಿತ್ರಾರ್ಜಿತ ಆಸ್ತಿ, 2.57 ಕೋಟಿ ಮೌಲ್ಯದ ಷೇರುಗಳು ಮತ್ತು 61.53 ಲಕ್ಷ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ. ಹೇಮಾ ಮಾಲಿನಿ ಅವರು 3.39 ಕೋಟಿ ಮೌಲ್ಯದ ಆಭರಣ ಹೊಂದಿದ್ದಾರೆ. ಇದಲ್ಲದೆ, ಅವರು ಮತ್ತು ಅವರ ಪತಿ ಬಂಗಲೆಗಳು ಮತ್ತು ಇತರ ಆಸ್ತಿಗಳನ್ನು ಒಳಗೊಂಡಂತೆ ಕ್ರಮವಾಗಿ 1.13 ಬಿಲಿಯನ್ ರೂ ಮತ್ತು 1.36 ಬಿಲಿಯನ್ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಹೇಮಾ 1.42 ಕೋಟಿ ಸಾಲ ಹೊಂದಿದ್ದರೆ, ಧರ್ಮೇಂದ್ರ 6.49 ಕೋಟಿ ಸಾಲ ಹೊಂದಿದ್ದಾರೆ. ಹೇಮಾ ಅವರ 129 ಕೋಟಿ ರೂ. ಆಸ್ತಿ, ಧರ್ಮೇಂದ್ರ ಅವರ 168 ಕೋಟಿ ರೂ. ಆಸ್ತಿ ಸೇರಿ ಒಟ್ಟು 297 ಕೋಟಿ ರೂ. ಆಸ್ತಿ ಹೊಂದಿದ್ದಾರೆ.