ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಗೆ ದಿನ ಸಮೀಪಿಸುತ್ತಿರುವಂತೆಯೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯನ್ನು ಸಿದ್ಧಪಡಿಸಲು ಅಳವಡಿಸಿದ ಮಾನದಂಡಗಳನ್ನೇ ರಾಜ್ಯದಲ್ಲೂ ಅನ್ವಯಿಸಿದರೆ 10ಕ್ಕೂ ಹೆಚ್ಚು ಬಿಜೆಪಿ ಸಂಸದರ ಮರು ಸ್ಪರ್ಧೆಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
ವಯಸ್ಸು, ಅನಾರೋಗ್ಯ, ಸ್ವಯಂ ನಿವೃತ್ತಿ, ವೈಯಕ್ತಿಕ ಕಾರಣಗಳಿಂದ ಕೆಲವು ಸಂಸದರು ಮರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರೆ ಇನ್ನೂ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಲ್ಲಿ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇರುವುದು, ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಳ್ಳದೆ ಕೆಂಗಣ್ಣಿಗೆ ಗುರಿಯಾಗಿರುವುದು ಸೇರಿದಂತೆ ಅನೇಕ ಕಾರಣಗಳಿಂದ ಕೆಲವು ಸಂಸದರಿಗೆ ಟಿಕೆಟ್ ಕೈತಪ್ಪುವ ಸಂಭವ ಸಾಧ್ಯತೆ ಇದ್ದು, 10 ಸಂಸದರ ಮರು ಸ್ಪರ್ಧೆ ಅನುಮಾನ ಎನ್ನಲಾಗಿದೆ.
ವಯಸ್ಸು, ಅನಾರೋಗ್ಯ, ಸ್ವಯಂ ನಿವೃತ್ತಿ, ಜನ ವಿರೋಧಿ, ಕ್ಷೇತ್ರ ಮರೆತವರು, ವಿವಾದಿತ ಹೇಳಿಕೆ ನೀಡುವವರಿಗೆ ಈ ಬಾರಿ ಟಿಕೆಟ್ ಕೈತಪ್ಪ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೂರು ಪ್ರತ್ಯೇಕ ಏಜೆನ್ಸಿಗಳಿಂದ ಬಿಜೆಪಿ ವರಿಷ್ಠರು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಸರ್ವೆ ವರದಿ ಪಡೆದುಕೊಂಡಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಸಮಾಲೋಚನೆ ಕ್ಷೇತ್ರವಾರು ವೀಕ್ಷಕರು, ಪ್ರಮುಖರೊಂದಿಗೆ ನಡೆಸಿದ ಚರ್ಚೆ ಅನ್ವಯ ಸಂಗ್ರಹಿಸಿದ ಅಭಿಪ್ರಾಯ ಆಧರಿಸಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.