ಕೊಪ್ಪಳ: ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಹಣ ವಸೂಲಿ ಕರೆಗಳಿಗೆ ಸ್ಪಂದಿಸದಿರಿ ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಎನ್.ಜಿ.ಓ. ಸಂಸ್ಥೆ ಎಂದು ಸಾರ್ವಜನಿಕರಿಗೆ ದೂರವಾಣಿ ಕರೆ ಮಾಡಿ ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಲ್ಲಿ ಸಾಲ ಸೌಲಭ್ಯಕೊಡುವುದಾಗಿ ನಂಬಿಸಿ, ಬ್ಯಾಂಕ್ ಖಾತೆ ಅಥವಾ ಯುಪಿಐ ಮೂಲಕ ಪಾವತಿಸುವಂತೆ ತಿಳಿಸಿ ಹಣ ವಸೂಲಿ ಮಾಡಲಾಗುತ್ತಿರುವ ಘಟನೆಗಳು ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವುದು ತಿಳಿದುಬಂದಿರುತ್ತದೆ. ಈ ತರಹದ ಯಾವುದೇ ಕರೆಗಳನ್ನು ಪಶು ಇಲಾಖೆಯಿಂದ ಮಾಡಲಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ರೈತರು, ಸಾರ್ವಜನಿಕರು ಈ ತರಹದ ಯಾವುದೇ ಕರೆಗಳನ್ನು ನಂಬಿ ತಮ್ಮ ಹಣವನ್ನು ನೀಡಬಾರದು.
ಕುರಿ ಸಾಕಾಣಿಕೆ ಅಥವಾ ಯಾವುದೇ ಯೋಜನೆಗಳಲ್ಲಿ ಸಾಲ ಮತ್ತು ಸಹಾಯಧನ ಕೊಡಿಸುವುದಾಗಿ ಕರೆಗಳು ಬಂದಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಸಂಪರ್ಕಿಸಿ, ಖಚಿತಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಲಾಗಿದೆ.