ಚಂಡೀಗಢ: ‘ಪತ್ನಿಗೆ ವಿಚ್ಛೇದನ ನೀಡದೆ ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಲ್ಲಿ ಇಬ್ಬರ ಸಂಬಂಧವನ್ನು ಸಹಜೀವನ ಅಥವಾ ವಿವಾಹದಂತಹ ಸಂಬಂಧ ಎಂದು ಕರೆಯುವಂತಿಲ್ಲ.’
ಹೀಗೆಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ರಕ್ಷಣೆ ಕೋರಿ ಪಂಜಾಬ್ ನ ಜೋಡಿ ಸಲ್ಲಿಸಿದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಕುಲದೀಪ್ ತಿವಾರಿ ಅವರಿದ್ದ ಏಕ ಸದಸ್ಯ ಪೀಠ ವಜಾಗೊಳಿಸಿದ್ದು, ವಿಚ್ಛೇದನ ನೀಡದೆ ಪರಸ್ತ್ರೀ ಜೊತೆ ವಾಸ ಸಹಜೀವನ ಅಲ್ಲ ಎಂದು ಹೇಳಿದೆ.
ತಮ್ಮ ಸಹಜೀವನ ಸಂಬಂಧದಿಂದ ಆಕ್ರೋಶಗೊಂಡ ಮಹಿಳೆಯ ಕುಟುಂಬ ಸದಸ್ಯರು ಕೊಲೆ ಬೆದರಿಕೆ ಹಾಕಿರುವುದಾಗಿ ಅರ್ಜಿದಾರರು ದೂರಿದ್ದಾರೆ. ಸಹಜೀವನ ನಡೆಸುತ್ತಿರುವ ಮಹಿಳೆಗೆ ಮದುವೆಯಾಗಿಲ್ಲ, ಆದರೆ, ವ್ಯಕ್ತಿಗೆ ಮದುವೆಯಾಗಿದೆ. ಪತ್ನಿಯೊಂದಿಗಿನ ಸಂಬಂಧ ಸರಿ ಇಲ್ಲದ ಕಾರಣ ವ್ಯಕ್ತಿ ಪತ್ನಿಯಿಂದ ದೂರವಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿರುವುದಾಗಿ ವಿಚಾರಣೆ ವೇಳೆ ನ್ಯಾಯಪೀಠ ಗಮನಿಸಿದೆ.
ಸಂಗಾತಿಯಿಂದ ವಿಚ್ಛೇದನ ಪಡೆಯದೆ ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದು ಐಪಿಸಿ ಸೆಕ್ಷನ್ ನ 494/495ರ ಅಡಿ ಶಿಕ್ಷಾರ್ಹ ಅಪರಾಧವಾಗಬಹುದು. ಅಂತಹ ಸಂಬಂಧ ಮದುವೆಯ ಸ್ವರೂಪದಲ್ಲಿ ಬರುವುದಿಲ್ಲ. ವಿಚ್ಛೇಧನ ನೀಡದೇ ವಿವಾಹೇತರ ಸಂಬಂಧ ಹೊಂದಿದಲ್ಲಿ ಅದನ್ನು ಸಹಜೀವನ ಅಥವಾ ವಿವಾಹದಂತಹ ಸಂಬಂಧ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.