ಬೆಂಗಳೂರು: ಲೆನ್ಸ್ ಕಾರ್ಟ್ ಉದ್ಯಮ ಘಟಕ ಸ್ಥಾಪಿಸಲು ಕೈಗಾರಿಕಾ ಇಲಾಖೆ ಅಗತ್ಯ ನೆರವು ನೀಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 25 ಎಕರೆ ಜಮೀನು ಅಗತ್ಯವಿದೆ ಎಂದು ಲೆನ್ಸ್ ಕಾರ್ಟ್ ಪೋಸ್ಟ್ ಹಾಕಿದ್ದು, ಇದಕ್ಕೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸ್ಪಂದಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪಿಯುಷ್ ಬನ್ಸಾಲ್ ಅವರು ತಮ್ಮ ಅಗತ್ಯದ ಬಗ್ಗೆ ಪೋಸ್ಟ್ ಹಾಕಿ, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದಲ್ಲಿ ತಮಗೆ ಇ-ಮೇಲ್ ಕಳುಹಿಸುವಂತೆ ಕೋರಿದ್ದಾರೆ.
ಇದನ್ನು ಗಮನಿಸಿದ ಸಚಿವರು, ನೀವು ಇರಬೇಕಾದ ಜಾಗ ಕರ್ನಾಟಕ. ಕೈಗಾರಿಕಾ ಇಲಾಖೆ ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯ ಪೂರೈಸುವ ಬಗ್ಗೆ ನಮ್ಮ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ತಿಳಿಸಿದ್ದಾರೆ.