
ಕೊಪ್ಪಳ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, 2ಎ ಮೀಸಲಾತಿಗಾಗಿ ಕಾನೂನು ಹೋರಾಟ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಮೊದಲು ರಾಜ್ಯದಲ್ಲಿರುವ ಸಮುದಾಯದ ವಕೀಲರ ಸಂಘಟನೆಯ ಮಹಾಪರಿಷತ್ ನಡೆಸಲಾಗುವುದು. ಸೆಪ್ಟೆಂಬರ್ 2ರಂದು ಬೆಳಗಾವಿಯಲ್ಲಿ ಲಿಂಗಾಯಿತ ಪಂಚಮಸಾಲಿ ವಕೀಲರ ಮಹಾಪರಿಷತ್ ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯದ ಮೊರೆ ಹೋಗಲು ಸಮಾಜದ ವಕೀಲರ ಸಂಘಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮ ಸಮಾಜದ ಶಾಸಕರು, ಸಚಿವರು 2ಎ ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು. ಸಮಾಜದ ಶಾಸಕರು ಕೇವಲ ಪಕ್ಷದ ಪ್ರಭಾವ ಮತ್ತು ಚಿಹ್ನೆಯಿಂದ ಗೆದ್ದಿಲ್ಲ. ಸಮುದಾಯದ ಜನರ ಬೆಂಬಲ ಕೂಡ ಅವರಿಗೆ ಸಿಕ್ಕಿದ್ದು, ಸಮಾಜದ ಋಣ ತೀರಿಸಬೇಕು ಎಂದು ಆಗ್ರಹಿಸಿದ್ದಾರೆ.