ಬೆಂಗಳೂರು: ಉಪನ್ಯಾಸಕರ ವಿರೋಧದ ನಡುವೆಯೂ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಎರಡು ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಿ,ದ್ದು ಈ ವರ್ಷದಿಂದಲೇ ಜಾರಿಯಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಮೊದಲ ಪೂರಕ ಪರೀಕ್ಷೆ ಮುಗಿದಿದ್ದು, ಪೂರಕ ಎರಡನೇ ಪೂರಕ ಪರೀಕ್ಷೆಗೆ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಗಸ್ಟ್ 21ರಿಂದ ಸೆಪ್ಟಂಬರ್ 2ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಬಹುತೇಕ ಎಲ್ಲಾ ಪರೀಕ್ಷೆಗಳು ಮಧ್ಯಾಹ್ನ 2.15ರಿಂದ ಸಂಜೆ 5.30ರವರೆಗೆ ನಡೆಯಲಿವೆ.
ವಿದ್ಯಾರ್ಥಿಗಳಿಗೆ ಪಾಸಾಗಲು ಒಂದು ಹೆಚ್ಚುವರಿ ಅವಕಾಶ ಸಿಗಲಿ ಎಂದು ಉದ್ದೇಶದಿಂದ ಸರ್ಕಾರ ಎರಡು ಸಲ ಪರೀಕ್ಷೆ ನಡೆಸಲು ಮುಂದಾಗಿದ್ದು, ವರ್ಷವಿಡಿ ಪರೀಕ್ಷೆ ನಡೆಸಿದರೆ ಪಾಠ ಬಿಟ್ಟು ಪರೀಕ್ಷೆಗಳಿಗೆ ಸಿದ್ಧತೆ ಕೈಗೊಳ್ಳಲು ಸಮಯ ವ್ಯರ್ಥವಾಗುತ್ತದೆ ಎಂಬ ಉಪನ್ಯಾಸಕರ ವಿರೋಧವನ್ನು ಲೆಕ್ಕಿಸದೆ ಎರಡು ಸಲ ಪೂರಕ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.