ಚಿಕ್ಕಮಗಳೂರು: ವಕೀಲರೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ವಕೀಲ ಪ್ರೀತಂ ಎಂಬುವವರು ನ.30ರಂದು ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದರು. ವಕೀಲನನ್ನು ತಡೆದ ಪೊಲೀಸರು ಬೈಕ್ ಕೀ ತೆಗೆದುಕೊಂಡು ದಂಡ ಪಾವತಿಸಲು ಸೂಚಿಸಿದ್ದಾರೆ. ಈ ವೇಳೆ ವಕೀಲ ಹಾಗೂ ಪೊಲೀಸರ ನಡುವೆ ಮಾತಿಗೆ ಮಾತು ಆರಂಭವಾಗಿದೆ. ಬಳಿಕ ವಕೀಲ ಪ್ರೀತಂ ದಂಡ ಪಾವತಿಸುವುದಾಗಿ ಹೇಳಿದರೂ ಪೊಲೀಸ್ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹೆಲ್ಮೆಟ್ ವಿಚಾರವಾಗಿ ಆರಂಭವಾದ ವಾಗ್ವಾದ ಪೊಲೀಸ್ ಠಾಣೆಯವರೆಗೂ ಬಂದಿದ್ದು, ವಕೀಲ ಪ್ರೀತಂ ಮೇಲೆ ಪೊಲೀಸ್ ಸಿಬ್ಬಂದಿಗಳು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಈ ಪ್ರಕರಣ ಸಂಬಂಧ ಓರ್ವ ಪಿಎಸ್ ಐ, ಓರ್ವ ಎ ಎಸ್ ಐ, ಓರ್ವ ಹೆಡ್ ಕಾನ್ಸ್ ಟೇಬಲ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 324, 504, ಮತ್ತು 506 ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿ ಅಮಾನತುಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್ ಪಿ ವಿಕ್ರಂ ಆಮ್ಟೆ ತಿಳಿಸಿದ್ದಾರೆ.
ಗಾಯಾಳು ವಕೀಲ ಪ್ರೀತಂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ವಕೀಲ ಪ್ರೀತಂ ಭೇಟಿಯಾದ ಚಿಕ್ಕಮಗಳೂರು ಡಿವೈಎಸ್ ಪಿ ಹೇಳಿಕೆ ಬಳಿಕ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.