ಬೆಂಗಳೂರು: ಕಕ್ಷಿದಾರರ ಅರ್ಜಿ ತಿರಸ್ಕರಿಸಿದ್ದಕ್ಕೆ ವಕೀಲರೊಬ್ಬರು ಸಿಟ್ಟಿಗೆದ್ದು ನ್ಯಾಯಮೂರ್ತಿ ವಿರುದ್ಧವೇ ತಿರುಗಿ ಬಿದ್ದು ಕಡತಗಳನ್ನು ಎಸೆದ ಘಟನೆ ನಡೆದಿದ್ದು, ವಕೀಲರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶ ನೀಡಿದೆ.
ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಪರವಾಗಿ ಸಲ್ಲಿಸಿದ್ದ ಕೇವಿಯೆಟ್ ಆಕ್ಷೇಪಿಸಿ ಅರ್ಜಿದಾರ ಅನ್ಣಾದೊರೈ ಎಂಬುವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಯಾವುದೇ ಅರ್ಜಿ ದಾಖಲಿಸಿದರೂ ತಮ್ಮ ಗಮನಕ್ಕೆ ತರಬೇಕು ಎಂದು ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪರವಾಗಿ ಅದರ ವ್ಯವಸ್ಥಾಪಕ ನಿರ್ದೇಶಕರು ಕೇವಿಯೆಟ್ ಸಲ್ಲಿಸಿದ್ದರು.
ವ್ಯವಸ್ಥಾಪಕ ನಿರ್ದೇಶಕರು ಅಥವಾ ಕೇವಿಯೆಟರ್ ಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪರವಾಗಿ ಕೇವಿಯೆಟ್ ಅರ್ಜಿ ಸಲ್ಲಿಸುವ ಅಧಿಕಾರ ಇದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದು, ನ್ಯಾಯಾಲಯ ಈ ಅರ್ಜಿ ವಜಾಗೊಳಿಸಿ 10 ಸಾವಿರ ರೂ.ಗಳನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ನಾಲ್ಕು ವಾರದಲ್ಲಿ ಪಾವತಿಸಲು ಸೂಚನೆ ನೀಡಿತ್ತು. ಅರ್ಜಿ ಅರ್ಹತೆ ಕುರಿತು ವಾದಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ತಿಳಿಸಿತ್ತು.
ಇದರಿಂದ ಕೋಪಗೊಂಡ ವಕೀಲರು ಕಡತವನ್ನು ನ್ಯಾಯಾಧೀಶರ ಕಡೆಗೆ ಎಸೆದಿದ್ದಾರೆ. ಆಗ ನ್ಯಾಯಮೂರ್ತಿ ಕೆ.ಎಸ್. ಹೇಮಲತಾ ಅವರಿದ್ದ ಏಕ ಸದಸ್ಯ ಪೀಠ, ವಕೀಲರು ಆಕ್ಷೇಪವಾಗಿ ಮಾತನಾಡಿದ್ದು, ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಕೀಲರ ನಡೆ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಿದೆ. ಅವರ ಕೃತ್ಯ ನ್ಯಾಯಾಲಯದ ಸಾಮಾನ್ಯ ಪ್ರಕ್ರಿಯೆ, ಕಾರ್ಯ ವಿಧಾನದಲ್ಲಿ ಹಸ್ತಕ್ಷೇಪ ಮಾಡಿದ್ದು, ನ್ಯಾಯಾಲಯದ ಘನತೆಗೆ ಹಾನಿ ಉಂಟು ಮಾಡಿದೆ. ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಆದೇಶ ನೀಡಿದೆ.