ಬೆಂಗಳೂರು : ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ತಡೆಗಟ್ಟಲು ರೇರಾ (ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ )ದ ಅನುಮತಿ ಇಲ್ಲದೆ ನಿವೇಶನಗಳ ನೋಂದಣಿ ಮಾಡದಂತೆ ಕಾನೂನಿಗೆ ತಿದ್ದು ಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ
ಅವರು ಇಂದು ಮಂಗಳವಾರ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಮಾತನಾಡಿದರು.
ಯೋಜನಾ ವ್ಯಾಪ್ತಿಯಲ್ಲಿ ಹೊಸದಾಗಿ ಬಡಾವಣೆ ರಚನೆ ಮಾಡುವವರು ರೇರಾ ಅನುಮತಿ ಪಡೆಯದೆ ನಿವೇಶನ ಮಾರಾಟ ಮಾಡುತ್ತಿದ್ದು ಕೆಲವೆಡೆ ವಿವಾದ ಇರುವ ಜಮೀನುಗಳಲ್ಲಿ ಬಡಾವಣೆ ರಚನೆ ಮಾಡಿರುವುದರಿಂದ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಇದನ್ನು ತಪ್ಪಿಸಲು ರೇರಾ ಅನುಮತಿ ಇಲ್ಲದಿರುವ ಬಡಾವಣೆ ಗಳ ನಿವೇಶನ ನೋಂದಣಿ ಮಾಡುವಂತಿಲ್ಲ ಎಂಬ ಕಾನೂನು ತರಲಾಗುವುದು ಎಂದು ಹೇಳಿದರು.
ರೇರಾ ದಲ್ಲಿ ನೋಂದಣಿ ಕಡ್ಡಾಯ ಎಂದು ನಿಯಮ ಇದ್ದರೂ ಅನಧಿಕೃತ ವಾಗಿ ಕೆಲವರು ಬಡಾವಣೆ ರಚಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಸಮಸ್ಯೆ ಉಂಟಾದರೆ ನಿವೇಶನ ಖರೀದಿಸಿದವರು ರೇರಾ ಬಳಿ ಬರುತ್ತಿದ್ದಾರೆ. ಆದರೆ ಅ ಹಂತದಲ್ಲಿ ರೇರಾ ಏನೂ ಮಾಡಲು ಬರುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಯಮಾವಳಿ ರೂಪಿಸಲಾಗುವುದು ಎಂದು ತಿಳಿಸಿದರು.
ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ಬಿಲ್ಡರ್, ಡೆವಲಪರ್, ಪ್ರಮೋಟರ್ ಗಳು ಒಪ್ಪಂದದಂತೆ ನಿಗದಿತ ವೇಳೆಯಲ್ಲಿ ಪ್ಲಾಟ್ ಕೊಡದೆ ಅನಗತ್ಯ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಒಪ್ಪಂದ ದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತಕ್ಕೆ ಒತ್ತಾಯ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು ಆ ಬಗ್ಗೆ ಗಂಭೀರ ವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.