
ಬೆಂಗಳೂರು: ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ರಾಜ್ಯದಲ್ಲಿ ಲ್ಯಾಪ್ಟಾಪ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ. 1,500 ಕೋಟಿ ರೂ. ಹೂಡಿಕೆ ಮಾಡಲಿದೆ.
ಈ ಸಂಬಂಧ ವಿಸ್ಟ್ರಾನ್ ಅಧ್ಯಕ್ಷರು ರಾಜ್ಯ ಸರ್ಕಾರದೊಂದಿಗೆ ಅಧಿಕೃತ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ವಿಸ್ಟ್ರಾನ್ ಕಂಪನಿ ಈಗಾಗಲೇ ಕೋಲಾರದಲ್ಲಿ ಬೇರೆ ಘಟಕ ಹೊಂದಿದೆ. ಈ ಹೊಸ ಹೂಡಿಕೆ ಮೂಲಕ ರಾಜ್ಯದಲ್ಲಿ ಮೊದಲ ಲ್ಯಾಪ್ಟಾಪ್ ತಯಾರಿಕಾ ಘಟಕ ತೆರೆಯಲಿದೆ ಎಂದು ತಿಳಿಸಿದ್ದಾರೆ.
2026ರ ಜನವರಿ ಬೇಳೆಗೆ ಉತ್ಪಾದನೆ ಚಟುವಟಿಕೆಗಳು ಆರಂಭವಾಗಲಿದ್ದು, ಮೂರು ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಈ ಯೋಜನೆಗೆ ಬೆಂಗಳೂರು ಸಮೀಪ 32 ಎಕರೆ ಜಮೀನು ಕೇಳಿದ್ದು, ಒಂದು ವಾರದಲ್ಲಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ನಮ್ಮ ಸರ್ಕಾರ ಕೈಗಾರಿಕೆ ಮತ್ತು ಹೂಡಿಕೆಗಳ ಪರವಾಗಿದ್ದು, ಉದ್ಯಮಸ್ನೇಹಿ ನೀತಿಗಳನ್ನು ಹೊಂದಿದೆ. ಜೊತೆಗೆ ಕಾಲಕಾಲಕ್ಕೆ ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನ ಜತೆಗೆ ರಾಜ್ಯದ ಉಳಿದ ಭಾಗಗಳಲ್ಲೂ ಆಧುನಿಕ ಉದ್ಯಮಗಳು ನೆಲೆಯೂರುವಂತೆ ಮಾಡಲು ಆದ್ಯತೆ ನೀಡುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವಿಸ್ಟ್ರಾನ್ ಕಂಪನಿಯ ಅಧ್ಯಕ್ಷ ಅಲೆಕ್ ಲಾಯ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.