ಕೃಷಿ ಚಟುವಟಿಕೆಗಳಲ್ಲಿ ಭೂಮಿ ಸಿದ್ದಪಡಿಸುವಿಕೆ ಬಹು ಮುಖ್ಯ ಸಾಗುವಳಿ ಕ್ರಮ. ಇದರ ಮೊದಲ ಹಂತ ಬೇಸಿಗೆ ಉಳುಮೆ ಅಥವಾ ಮಾಗಿ ಉಳುಮೆ.
ರೈತ ಬಾಂಧವರು ಮೇ ತಿಂಗಳಿನಲ್ಲಿ ಎಂಬಿ ನೇಗಿಲಿನಿಂದ ಹೊಲವನ್ನು ಉಳುಮೆ ಮಾಡಬೇಕು. ಇದರಿಂದ ಮಣ್ಣು ಸಡಿಲಗೊಂಡು ಕೆಳಗಡೆ ಇರುವಂತಹ ಸಮೃದ್ಧವಾದ ಪೋಷಕಾಂಶಯುಕ್ತ ಮಣ್ಣು ಮೇಲ್ಬಾಗಕ್ಕೆ ಬರುತ್ತದೆ. ಸೂರ್ಯನ ಕಿರಣಗಳ ಶಾಖಕ್ಕೆ ಒಳಗಾಗುವುದರಿಂದ ಮಣ್ಣು ಹೆಚ್ಚು ಫಲವತ್ತತೆಯನ್ನು ಹೊಂದುತ್ತದೆ. ಉಳುಮೆ ಮಾಡಿದ ಮಣ್ಣು ಸೂಕ್ಷ್ಮ ಜೀವಿಗಳಿಗೆ ಹಾಗೂ ರೈತನ ಮಿತ್ರ ಎರೆಹುಳುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.
ಇದಲ್ಲದೆ ಮಾಗಿ ಉಳುಮೆ ಮಾಡುವುದರಿಂದ ಕಳೆಗಳ ಹತೋಟಿ ಮಾಡಬಹುದು ಮತ್ತು ಮಣ್ಣಿನಲ್ಲಿ ಅವಿತಿರುವಂತಹ ಕೀಟ ಹಾಗೂ ಅವುಗಳ ತತ್ತಿಗಳು ಮತ್ತು ಕೋಶಗಳು ಸೂರ್ಯನ ಶಾಖಕ್ಕೆ ಒಡ್ಡಿಕೊಂಡು ಅವುಗಳ ಸಂತತಿ ಕಡಿಮೆ ಆಗುತ್ತದೆ ಮತ್ತು ಸಮರ್ಪಕವಾಗಿ ಹತೋಟಿ ಆಗುತ್ತದೆ.
ಮಾಗಿ ಉಳುಮೆ ಮಾಡುವ ಮೊದಲು ರೈತರು ತಮ್ಮ ಹೊಲಗಳಿಗೆ ಹೆಕ್ಟೆರಿಗೆ 10 ಟನ್‍ಗಳಷ್ಟು ಕೊಟ್ಟಿಗೆ ಅಥವಾ ಸಗಣಿ ಗೊಬ್ಬರವನ್ನು ಸಮನಾಗಿ ಹರಡಿ ನಂತರ ನೇಗಿಲಿನಿಂದ ಉಳುಮೆ ಮಾಡಿ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬಹುದು ಎಂದು ಕೃಷಿ ಇಲಾಖೆಯ ಧಾರವಾಡ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.