ಮುಂಬೈನ ಐತಿಹಾಸಿಕ ಪ್ರಸಿದ್ಧ ಲಾಲ್‌ಬೌಚಾ ರಾಜಾ ಮಂಡಲವು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಕ್ತರಿಂದ 5 ಕೋಟಿ ರೂಪಾಯಿಗಿಂತ ಹೆಚ್ಚಿನ ದೇಣಿಗೆ ಹಣ ಪಡೆದಿದೆ. ಇದಲ್ಲದೇ ಗಣೇಶ ದರ್ಶನ ವೇಳೆ ಭಕ್ತರು ನೀಡಿದ ದೇಣಿಗೆ ವಸ್ತುಗಳ ಹರಾಜಿನಿಂದ 80 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಗಳಿಸಿದೆ.
ಗಣೇಶನ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಂದ ಪಡೆದ 3.5 ಕೆಜಿ ಚಿನ್ನ ಮತ್ತು 64 ಕೆಜಿ ಬೆಳ್ಳಿಯ ದೇಣಿಗೆಯಿಂದ ಲಾಲ್‌ಬೌಚಾ ರಾಜಾ ಮಂಡಲವು 80.7 ಲಕ್ಷ ರೂಪಾಯಿಗಳನ್ನು ಹರಾಜಿನ ಮೂಲಕ ಗಳಿಸಿದೆ. ಇದರೊಂದಿಗೆ 90 ವರ್ಷದ ಲಾಲ್‌ಬೌಚಾ ರಾಜಾ ಮಂಡಲವು 5 ಕೋಟಿ ರೂಪಾಯಿಗಿಂತ ಹೆಚ್ಚಿನ ನಗದು ದೇಣಿಗೆ ಪಡೆದಿದೆ.
ಮಂಡಲದ ಅಧ್ಯಕ್ಷ ಬಾಳಾಸಾಹೇಬ ಕಾಂಬಳೆ ಮಾತನಾಡಿ, ‘ಮಂಡಲದಿಂದ ಭಾನುವಾರ ಒಟ್ಟು 110 ವಸ್ತುಗಳನ್ನು ಹರಾಜು ಮಾಡಿದ್ದು, ಇದರಿಂದ ಅಂದಾಜು 80.7 ಲಕ್ಷ ರೂ. ಬಂದಿದೆ. ಭಕ್ತರು ಗಣೇಶನ ವಿಗ್ರಹ, ಮೂಷಿಕ, ಗದೆ, ತೆಂಗಿನಕಾಯಿ, ಬಾಳೆಹಣ್ಣು, ತೊಟ್ಟಿಲು, ಕಿರೀಟ, ನೆಕ್ಲೇಸ್ ಸೇರಿದಂತೆ ಅಮೂಲ್ಯವಾದ ಲೋಹಗಳಿಂದ ಮಾಡಿದ ವಿವಿಧ ವಸ್ತುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ವಸ್ತುಗಳ ಹರಾಜಿನಿಂದ ಬಂದ ಹಣವನ್ನ ಲೋಕೋಪಕಾರಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.
2022 ರಲ್ಲಿ ಗಣಪತಿ ಮಂಡಲವು ಒಟ್ಟು ರೂ. 1.25 ಕೋಟಿ ಗಳಿಸಿತ್ತು. ಕಳೆದ ಬಾರಿ ಅದರ ಒಟ್ಟು ಗಳಿಕೆ ರೂ 6.25 ಕೋಟಿ ಆಗಿತ್ತು. 2018 ರಲ್ಲಿ ಮಂಡಲವು 5.5 ಕೆಜಿ ಚಿನ್ನ ಮತ್ತು 75 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 8 ಕೋಟಿ ರೂ. ಸಂಗ್ರಹಿಸಿತ್ತು.
ಲಾಲ್‌ಬಾಗ್ ಚಾ ರಾಜಾ ಗಣೇಶೋತ್ಸವ ಮಂಡಲವು 2020 ಮತ್ತು 2021 ರಲ್ಲಿ ಕೋವಿಡ್‌ನಿಂದಾಗಿ ಗಣೇಶೋತ್ಸವ ಆಚರಿಸಿರಲಿಲ್ಲ. ಬಳಿಕ ಎರಡು ವರ್ಷಗಳ ಅಂತರದ ನಂತರ ಪೂರ್ಣ ಪ್ರಮಾಣದ ಉತ್ಸವವನ್ನು ಪುನರಾರಂಭಿಸಿತು. 2020 ರಲ್ಲಿ ಗಣೇಶೋತ್ಸವ ಆಚರಣೆ ಬದಲು ರಕ್ತದಾನ ಶಿಬಿರಗಳು, ಪ್ಲಾಸ್ಮಾ ಸಂಗ್ರಹಣಾ ಶಿಬಿರಗಳನ್ನು ಮಂಡಲ ಆಯೋಜಿಸಿತ್ತು.