ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಬಾರದಿರುವ ಬಗ್ಗೆ ಮಹಿಳೆಯರು ದೂರು ನೀಡುತ್ತಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲ್ಲೇಶ್ವರಂ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನೋಂದಣಿ ಪರಿಶೀಲನೆ ನಡೆಸಿದರು. ಪ್ರತಿ ಜಿಲ್ಲೆಯಿಂದಲೂ ಮಾಹಿತಿ ಪಡೆದುಕೊಂಡರು.
ಕಲಬುರ್ಗಿ ಜಿಲ್ಲೆಯೊಂದರಲ್ಲಿಯೇ 14 ಸಾವಿರ ಗೃಹ ಲಕ್ಷ್ಮೀ ಯೋಜನೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕಲಬುರ್ಗಿ ಸಿಡಿಪಿಒರನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಅರ್ಜಿ ವಿಲೇವಾರಿ ಮಾಡಲು ಏನು ಸಮಸ್ಯೆ? ಯಾಕಿಷ್ಟು ಅರ್ಜಿಗಳು ಬಾಕಿ ಇವೆ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಾರದೊಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ ಸಿಡಿಪಿಒ ತಿಳಿಸಿದ್ದಾರೆ.