ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿಯ ಪಿಎ ಎಂದು ಹೇಳಿಕೊಂಡು ಸರ್ಕಾರಿ ಮಹಿಳಾ ಅಧಿಕಾರಿಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಕ್ರಂ ಗೋಪಾಲಸ್ವಾಮಿ ಬಂಧಿತ ಆರೋಪಿ. ಈತ ತಾನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡು, ಡಿಜಿ, ಕಮಿಷ್ನರ್ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಕಂದಾಯ ಇಲಾಖೆಯಲ್ಲಿದ್ದ ಮಹಿಳಾ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ.
ಅನುಮಾನಗೊಂಡ ಓರ್ವ ಅಧಿಕಾರಿ ಈತನ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕ್ರಂ ಗೋಪಾಲಸ್ವಾಮಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ವಿಕ್ರಂ ಗೋಪಾಲಸ್ವಾಮಿ ನಿವೃತ್ತ ಅಧಿಕಾರಿಯೊಬ್ಬರ ಮಗನಾಗಿದ್ದು, ವಿಧಾನಸೌಧ, ಎಂಎಸ್ ಬಿಲ್ಡಿಂಗ್ ನಲ್ಲಿಓಡಾಡುತ್ತಿದ್ದ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.