ಕೋಪದ ಕೈಗೆ ಬುದ್ಧಿ ಕೊಡಬಾರದು ಅನ್ನೋ ಮಾತೇ ಇದೆ. ಯಾಕಂದ್ರೆ ಕೋಪದ ಭರದಲ್ಲಿ ನಾವು ಆಡುವ ಮಾತು, ಮಾಡುವ ಅನಾಹುತ ನಂತರ ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ. ಆದರೆ ಕೋಪಕ್ಕೆ ಜೈವಿಕ ಕಾರಣ ಏನು ಎಂದು ಯೋಚಿಸಿದ್ದೀರಾ ?
ಕೋಪದ ಹಾರ್ಮೋನ್: ಕೋಪಗೊಳ್ಳುವುದು ಸಾಮಾನ್ಯ ವಿಷಯ. ಸದಾ ಶಾಂತವಾಗಿರುವ ಜನರು ಸಹ ಕೆಲವೊಮ್ಮೆ ಕೋಪಗೊಳ್ಳುತ್ತಾರೆ. ಆದರೆ ವಿಪರೀತ ಸಿಟ್ಟು ಮಾಡಿಕೊಳ್ಳುವುದು, ಸಣ್ಣಪುಟ್ಟ ವಿಷಯಕ್ಕೂ ಮುನಿಸಿಕೊಳ್ಳುವುದು ದೊಡ್ಡ ಸಮಸ್ಯೆ. ಕೋಪ ಬಂದಾಗ ನಿಯಂತ್ರಣ ಕಳೆದುಕೊಂಡು ಅನಾಹುತವನ್ನೇ ಮಾಡಿಬಿಡುತ್ತಾರೆ.
ಕೆಲವೊಮ್ಮೆ ಕ್ಷಣಿಕ ಕೋಪದಲ್ಲಿ ಮಾಡಬಾರದಂತಹ ಕೆಲಸ ಮಾಡಿ ನಂತರ ವಿಷಾದಿಸುತ್ತಾರೆ. ಕೋಪಕ್ಕೆ ಜೈವಿಕ ಕಾರಣವೇನು ? ಈ ಅವಧಿಯಲ್ಲಿ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ನೋಡೋಣ.
‘ಸೆರೊಟೋನಿನ್ ಹಾರ್ಮೋನ್’ ಕೋಪಕ್ಕೆ ಕಾರಣವಾಗಿದೆ. ಸಿರೊಟೋನಿನ್ ಕೊರತೆಯಿಂದಾಗಿ ಜನರು ಹೆಚ್ಚು ಕೋಪಗೊಳ್ಳುತ್ತಾರೆ. ಇದರ ಕೊರತೆಯನ್ನು ಆರೋಗ್ಯಕರ ಆಹಾರದಿಂದ ನೀಗಿಸಬಹುದು. ಕೋಪದ ಹೊರತಾಗಿ ನಮ್ಮಲ್ಲಿ ಪ್ರೀತಿ, ಸಂತೋಷ, ಭಾವುಕತೆ ಇತ್ಯಾದಿ ಭಾವನೆಗಳನ್ನು ಹಾರ್ಮೋನುಗಳು ನಿಯಂತ್ರಿಸುತ್ತವೆ.
ಕೋಪವು ಯಾವ ಪರಿಣಾಮ ಬೀರುತ್ತದೆ ?
ಕೋಪವು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮನಸ್ಸು ಚಂಚಲವಾಗುತ್ತದೆ. ಕೋಪದಿಂದ ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಾಗುತ್ತದೆ. ಕೋಪಗೊಂಡಾಗ ದೇಹದಲ್ಲಿ ಆಮ್ಲಜನಕದ ಪ್ರಮಾಣವೂ ಕಡಿಮೆಯಾಗುತ್ತದೆ.
ಕೋಪವನ್ನು ನಿಯಂತ್ರಿಸುವುದು ಹೇಗೆ ?
ಕೋಪವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ತಕ್ಷಣ ಶಾಂತವಾಗಿ ಎಲ್ಲೋ ಒಬ್ಬಂಟಿಯಾಗಿ ಹೋಗುವುದು. ಸಿಟ್ಟಾಗುವ ವಿಷಯದಿಂದ ಬೇರೆಡೆಗೆ ಗಮನಹರಿಸುವುದು. ಆಹಾರವು ಕೋಪದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅಮಲು ಪದಾರ್ಥಗಳನ್ನು ಸೇವಿಸಬೇಡಿ. ಹಣ್ಣುಗಳು, ಜ್ಯೂಸ್ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವ ಮೂಲಕ ಕೋಪದ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಸಣ್ಣ ವಿಷಯಕ್ಕೆ ಕೋಪ ಬಂದರೆ ಅದು ದೊಡ್ಡ ಸಮಸ್ಯೆ. ಇದನ್ನು ನಿಭಾಯಿಸಲು ಮನೋವೈದ್ಯರ ಸಲಹೆಯನ್ನು ತೆಗೆದುಕೊಳ್ಳಬಹುದು. ಆದರೆ ಕೋಪದ ಕಾರಣಗಳು, ಪರಿಣಾಮಗಳನ್ನೆಲ್ಲ ಯಾವುದೇ ಹಿಂಜರಿಕೆಯಿಲ್ಲದೆ ವೈದ್ಯರ ಬಳಿ ಮುಕ್ತವಾಗಿ ಹೇಳಬೇಕು.